ಎಲ್ಲ್ಲ ಭಾಷೆಗಳಿಗೂ ಮೂಲ ಸಂಸ್ಕೃತ
ಶಿವಮೊಗ್ಗ: ಸಂಸ್ಕೃತದಲ್ಲಿ ಜ್ಞಾನ, ವಿಜ್ಞಾನ ಎಲ್ಲವೂ ಅಡಗಿದ್ದು, ಇತ್ತೀಚೆಗೆ ಕೆಲವರು ಸಂಸ್ಕೃತವನ್ನು ಮೃತ ಭಾಷೆ, ಅದನ್ನು ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಆ ಭಾಷೆಗೇನು ಹಾನಿಯಿಲ್ಲ, ಹೇಳಿದವರ ವ್ಯಕ್ತಿತ್ವ ಎಂತಹದ್ದೆಂದುಲ ಗೊತ್ತಾಗುತ್ತದೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬೆಕ್ಕಿನ ಕಲ್ಮಠದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಕರ ಸಂಘ, ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಮಹಾವಿದ್ಯಾಲಯ ಹಮ್ಮಿಕೊಂಡ ಸಂಸ್ಕೃತ ಮಾಸ ಹಾಗೂ ಸಂಸ್ಕೃತ ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತ ಎಲ್ಲಾ ಭಾಷೆಗಳಿಗೂ ಮೂಲ. ವಿಶ್ವದಲ್ಲಿಯೇ ಉನ್ನತ ಸ್ಥಾನ ಪಡೆದಿದೆ ಎಂದರು. ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಭಾಷೆಗೆ ಮೈಲಿಗೆ ಇಲ್ಲ. ಮಾತೃ ಭಾಷೆಗೆ ಗೌರವ ಕೊಡುವುದು ಸರಿ, ಅದರ ಜೊತೆಗೆ ಸಂಸ್ಕೃತ ಭಾಷೆ ಕಲಿಯುವುದರಿಂದ ಇತರೆ ಎಲ್ಲಾ ಭಾಷೆಗಳು ಸುಲಭವಾಗಿ ಅರ್ಥವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಎಸ್‌ಜೆಜೆ ವಿದ್ಯಾಪೀಠದ ಕಾರ್ಯದರ್ಶಿ ಸಿ.ಬಿ. ಶಾಂತವೀರಯ್ಯ, ಸಂಸ್ಕೃತ ಭಾರತಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ಕಾಮತ್, ಡಾ.ವಿ.ಗಿರೀಶ್ ಚಂದ್ರ, ಡಾ. ಮಹಂತ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಸಿದ್ದಲಿಂಗ ಸ್ವಾಮೀಜಿ ಇದ್ದರು. ಮತ್ತೂರಿನ ವಿದ್ವಾಂಸ ಅಶ್ವತ್ಥನಾರಾಯಣ ಅವಧಾನಿಯವರನ್ನು ಸನ್ಮಾನಿಸಲಾಯಿತು.