'ನಿರಂತರ ಅಧ್ಯಯನದಿಂದ ಶಿಕ್ಷಕ ವೃತ್ತಿಗೆ ಗೌರವ'
ಶಿವಮೊಗ್ಗ: ಶಿಕ್ಷಕರಾದವರು ತಮ್ಮ ವಯಸ್ಸು, ವೃತ್ತಿ, ಜ್ಞಾನ ಬದಿಗಿಟ್ಟು ಕೊಡದಂತೆ ಬಾಗಿ ನೂತನ ಜ್ಞಾನ ಪಡೆದುಕೊಳ್ಳಲು ಮುಂದಾಗಬೇಕು ಎಂದು ಧಾರವಾಡದ ನಿವೃತ್ತ ಪ್ರಾಧ್ಯಾಪಕ ಸುರೇಶ್ ಕುಲಕರ್ಣಿ ಹೇಳಿದರು.
ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪ್ರಗತಿ ಆಪಲ್ ಎಜ್ಯುಕೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೃತ್ತಿ ನೈಪುಣ್ಯತೆ ಹೆಚ್ಚಿಸುವ ಮಾಸಿಕ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಕರು ಸರಳವಾಗಿ ವಿಷಯವನ್ನು ಅರ್ಥೈಸಿದಾಗ ಅವರಲ್ಲಿ ಆಶಾದಾಯಕ ಪ್ರಗತಿ ಕಾಣಲು, ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕರಾಗಲು, ವೃತ್ತಿ ಗೌರವ ಉಳಿಸಲು ಸಾಧ್ಯ ಎಂದರು.
ನಿರಂತರ ಅಧ್ಯಯನ, ಹೊಸ ವಿಷಯ ಮತ್ತು ಕಲಿಸುವಿಕೆಯಲ್ಲಿ ಕುತೂಹಲ ಬೆಳೆಸಿಕೊಂಡಲ್ಲಿ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ತಂದುಕೊಡಲು ಸಾಧ್ಯ ಎಂದರು.
ನಾನು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಾಠ ಮಾಡಿದರೂ ನನಗೆ ಇಲ್ಲಿಯವರೆಗೆ ದಡ್ಡ ವಿದ್ಯಾರ್ಥಿಗಳು ಸಿಕ್ಕೇ ಇಲ್ಲ ಎಂದ ಅವರು, ಅನೇಕ ರೇಖಾಚಿತ್ರಗಳನ್ನು ಬಿಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಹೇಗೆ ಸರಳವಾಗಿ ವಿಷಯ ಅರ್ಥೈಸಲು ಸಾಧ್ಯ ಎಂದು ಉದಾಹರಣೆ ಮೂಲಕ ತಿಳಿಸಿದರು.
ತರಬೇತಿಯಲ್ಲಿ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಚಾರ್ಯರಾದ ನಂದಾ ರಾವ್, ಪ್ರಗತಿ ಆಪಲ್ ಎಜ್ಯುಕೇಷನ್ ಸಿಇಒ ವಿಜಯಕುಮಾರ ಬಳಿಗಾರ್, ಉಪಪ್ರಾಚಾರ್ಯರಾದ ಹೇಮಾ, ಮುಖ್ಯ ಶಿಕ್ಷಕ ಆದರ್ಶ, ಗಿರೀಶ್ ಸೇರಿದಂತೆ ಭದ್ರಾವತಿ, ಕಾರೇಹಳ್ಳಿ, ಗುರುಪುರ, ಶಂಕರಘಟ್ಟದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಭಾಗವಹಿಸಿದ್ದರು.