ಮಳೆ ಹಾನಿ: ಅಧಿಕಾರಿಗಳ ಸಭೆ ನಡೆಸಿದ ಕಿಮ್ಮನೆ
ಕ.ಪ್ರ. ವಾರ್ತೆ, ಹೊಸನಗರ, ಆ. 3
ತಾಲೂಕಿನಲ್ಲಿ ಅತಿವೃಷ್ಟಿ ಸಂಬಂಧ ವಿವಿಧ ಇಲಾಖೆಗಳಿಂದ ಮೊದಲ ಹಂತವಾಗಿ ಸುಮಾರು ರು. 15 ಕೋಟಿ ಅಂದಾಜು ಹಾನಿ ಸಮೀಕ್ಷೆ ಮಾಡಲಾಗಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಭಾನುವಾರ ತಾಪಂ ಸಭಾಂಗಣದಲ್ಲಿ ನೆರೆ ಹಾನಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾಹಿತಿ ನೀಡಿದರು.
ಜೂನ್, ಜುಲೈ ಕೊನೆಯ ವಾರದ ತನಕ ಸಾಕಷ್ಟು ಮಳೆ ಆಗದೆ ರೈತರು ಕಂಗಾಗಿದ್ದರು. ಆದರೆ ಕೇವಲ 5 ದಿನಗಳಲ್ಲಿ ದೊಡ್ಡ ಪ್ರಮಾಣದ ಮಳೆ ಸುರಿದ ಪರಿಣಾಮ ಈ ಹಾನಿ ಸಂಭವಿಸಿದೆ ಎಂದು ಹೇಳಿದರು.
ತಾಲೂಕಿನ ಬಿದರಹಳ್ಳಿ, ಕಲ್ಲೂರು ಸೇತುವೆ ಸೇರಿದಂತೆ 5 ಸೇತುವೆ ಹಾನಿ, 10ಕ್ಕೂ ಹೆಚ್ಚು ಕಿರು ಸೇತುವೆ ಹಾನಿ ಹಾಗೂ ಹೊಸನಗರ ತೀರ್ಥಹಳ್ಳಿ ರಸ್ತೆ ಸೇರಿದಂತೆ ಸುಮಾರು ರು. 15 ಕೋಟಿ ಅಂದಾಜು ನಷ್ಟ ಆಗಿದೆ. ಮಳೆಗಾಳಿಗೆ ವಿದ್ಯುತ್ ಕಂಬ ಮುರಿತ, ಪರಿವರ್ತಕ ಸುಟ್ಟು ಹೋಗಿರುವುದು ಸೇರಿದಂತೆ ಸುಮಾರು ಮೆಸ್ಕಾಂಗೆ ರು. 41.68 ಲಕ್ಷ ಹಾನಿ ಆಗಿದೆ ಎಂದು ತಿಳಿಸಿದರು.
ಮಳೆ ತಡವಾಗಿ ಆರಂಭ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಬತ್ತದ ನಾಟಿ ಇನ್ನೂ ಆರಂಭ ಆಗಿಲ್ಲದ ಕಾರಣ ಕೃಷಿ ಹಾನಿ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಆದರೂ ಬೇಹಳ್ಳಿ ಕೆರೆ, ಕರಿಗೆರಸು, ಮುಂಬಾರು ಹಳ್ಳ ತಿರುಗಿದ ಪರಿಣಾಮ ಜಮೀನು ಹಾಗೂ ತೋಟಕ್ಕೆ ಹಾನಿ ಆಗಿದೆ ಎಂದರು.
ಬಿಸಿಲು ಸಹಿತ ಮಳೆ ಆದ ನಗರ ಹೋಬಳಿಯ ಕೆಲವು ಗ್ರಾಮಗಳಲ್ಲಿ ಅಡಕೆಗೆ ಕೊಳೆ ರೋಗ ಬಂದಿರುವುದು ವರದಿ ಆಗಿದೆ. ಈ ಕುರಿತಂತೆ ಸಮಗ್ರ ಸಮೀಕ್ಷೆ ತೋಟಗಾರಿಕೆ ಇಲಾಖೆಗೆ ಸೂಚಿಸಲಾಗಿದೆ ಎಂದು ನುಡಿದರು. ನಂತರ ತಾಲೂಕಿನ ನೆರೆ ಪೀಡಿತ ಬಿದರಹಳ್ಳಿ, ನಿವಣೆ, ಸೊನಲೆ, ಕಲ್ಲೂರು, ಬೇಹಳ್ಳಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದರು. ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ್, ಸದಸ್ಯೆ ಜ್ಯೋತಿ ಚಂದ್ರಮೌಳಿ, ಕುನ್ನೂರು ಮಂಜಪ್ಪ, ತಹಶೀಲ್ದಾರ್ ಚಿದಂಬರ ಕುಲಕರ್ಣಿ, ಜಿಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ದೇಸಾಯಿ ಇದ್ದರು. ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ಭಟ್ ಸ್ವಾಗತಿಸಿದರು.
ಅತಿವೃಷ್ಟಿ; ಹೊಸನಗರ, ತೀರ್ಥಹಳ್ಳಿ ತಾಲೂಕಲ್ಲಿ ರು. 30 ಕೋಟಿ ನಷ್ಟ
ಹೊಸನಗರ: ತಾಲೂಕಿನಲ್ಲಿ ಸುರಿದ ವ್ಯಾಪಕ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿ, ಹೊಸನಗರ ಮತ್ತು ತೀರ್ಥಹಳ್ಳಿ ಈ ಎರಡು ತಾಲೂಕಿನಿಂದ ಒಟ್ಟು ರು. 30 ಕೋಟಿ ನಷ್ಟವಾಗಿದೆ ಎಂದು ಪ್ರಥಮ ಮಾಹಿತಿಯಲ್ಲಿ ತಿಳಿದು ಬಂದಿದೆ ಎಂದು ತಿಳಿಸಿದರು.
ಸಾಗರ ತಾಲೂಕಿನಲ್ಲಿ ಹಾನಿ ಸಂಭವಿಸಿರುವ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದರು.
ಹಾನಿ ಪ್ರಮಾಣದ ಬಗ್ಗೆ ಸಮಗ್ರ ವರದಿ ಪಡೆಯಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿಯನ್ನು ತ್ವರಿತ ತರಿಸಿಕೊಂಡು ಮುಂದಿನ ಪರಿಹಾರದ ಕ್ರಮ ಕೈಗೊಳ್ಳಲಾಗುವುದು ಎಂದರು. ತೀರ್ಥಹಳ್ಳಿ-ಹೊಸನಗರ ಸಂಪರ್ಕ ರಸ್ತೆ ಹಾನಿಗೊಂಡಿರುವ ಕೊಳಗಿ, ಬಿದರಳ್ಳಿ ಸೇತುವೆ, ಕಲ್ಲೂರು ಸೇತುವೆ, ನಿವಣೆ ಸೇರಿದಂತೆ ಹಲವು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ್, ಸದಸ್ಯೆ ಜ್ಯೋತಿ ಚಂದ್ರಮೌಳಿ, ಪಪಂ ಸದಸ್ಯ ಹಾಲಗದ್ದೆ ಉಮೇಶ್, ಕೊಡೂರು ಗ್ರಾಪಂ ಅಧ್ಯಕ್ಷ ಚಂದ್ರಮೌಳಿ, ತಹಶೀಲ್ದಾರ್ ಕುಲಕರ್ಣಿ, ಜಿಪಂ ಎಇಇ ಮಂಜುನಾಥ ದೇಸಾಯಿ, ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.