ಸಾಗರ ಆಸ್ಪತ್ರೆಯಲ್ಲಿನ ಹುದ್ದೆ ಕಡಿತ ಸಲ್ಲದು
ಸಾಗರ: ಉಪವಿಭಾಗೀಯ ಆಸ್ಪತ್ರೆಯಲ್ಲಿ ಹಾಲಿ ಇರುವ ಹುದ್ದೆಯನ್ನು ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಹಾಗೂ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಸಾಗರ ಶಾಖೆ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಜೋಗದಲ್ಲಿ ಮನವಿ ಸಲ್ಲಿಸಲಾಯಿತು.
ಸಾಗರದ ಉಪವಿಭಾಗ ಆಸ್ಪತ್ರೆಯಲ್ಲಿ 120 ಮಂಜೂರಾತಿ ಹುದ್ದೆಯಲ್ಲಿ 64 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸರ್ಕಾರದ ಆದೇಶದಂತೆ 38 ಹುದ್ದೆಯನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಕಡತ ಹಾಗೂ ರಿಜಿಸ್ಟರ್ ನಿರ್ವಹಣೆ ವಿಭಾಗದಲ್ಲಿ ಮೂರು ಪ್ರಥಮ ದರ್ಜೆ ಸಹಾಯಕರ ಹುದ್ದೆ ಅಗತ್ಯವಾಗಿದ್ದು, ಒಬ್ಬರೆ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಇದೆ.
ದ್ವಿತೀಯ ದರ್ಜೆ ಸಹಾಯಕರ 5 ಹುದ್ದೆಗಳ ಪೈಕಿ ಎರಡು ಹುದ್ದೆ ಖಾಲಿ ಇದ್ದು ಅದನ್ನು ತಕ್ಷಣ ಭರ್ತಿ ಮಾಡಬೇಕು. ಜೊತೆಗೆ 35 ಡಿ. ಗ್ರೂಪ್ ಹುದ್ದೆಯಲ್ಲಿ 12 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಈ ಆಸ್ಪತ್ರೆಗೆ ಬೇರೆ ಬೇರೆ ತಾಲೂಕುಗಳಿಂದಲೂ ರೋಗಿಗಳು ಬರುತ್ತಿದ್ದು, ವೈದ್ಯರ ಸಂಖ್ಯೆ ಕಡಿಮೆ ಇರುವುದರಿಂದ ಹೆಚ್ಚಿನ ಸೇವೆ ಅವರಿಗೆ ಸಿಗುತ್ತಿಲ್ಲ. ಸರ್ಕಾರಿ ಆದೇಶದ ಪ್ರಕಾರ ಈ ಆಸ್ಪತ್ರೆಗೆ ಯಾವುದೆ ಹುದ್ದೆಗಳನ್ನು ಕಡಿತಗೊಳಿಸಬಾರದು. ಮತ್ತೊಬ್ಬರು ಪ್ರಸೂತಿ ತಜ್ಞರು ಹಾಗೂ ಸರ್ಜನ್ ನೇಮಕ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಫಿಸಿಯೋಥೆರಪಿ ವಿಭಾಗವನ್ನು ಮುಚ್ಚುವ ಪ್ರಸ್ತಾಪ ಸರ್ಕಾರಿ ಆದೇಶದಲ್ಲಿದ್ದು, ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ. ಯಾವುದೆ ಕಾರಣಕ್ಕೂ ಈ ಘಟಕವನ್ನು ಮುಚ್ಚಬಾರದು. ಒಬ್ಬರು ಹಿರಿಯ ಪ್ರಯೋಗಾಶಾಲಾ ತಂತ್ರಜ್ಞರನ್ನು ನೇಮಿಸಬೇಕು. ಶುಶ್ರೂಷಕ ಸಿಬ್ಬಂದಿ ಹುದ್ದೆಯನ್ನು ಕಡಿತ ಮಾಡಬಾರದು. ಡಯಾಲಿಸಿಸ್ ವಿಭಾಗದ ಸಮರ್ಪಕ ಸೇವೆಗೆ ನೆಪ್ರಾಲಜಿಸ್ ಹಾಗೂ ಯೂರಾಲಜಿಸ್ ಹುದ್ದೆಯನ್ನು ಭರ್ತಿ ಮಾಡಬೇಕು. ಜೊತೆಗೆ ಡಯಾಲಿಸಿಸ್ ಘಟಕದಲ್ಲಿ ಖಾಲಿ ಇರುವ ತಂತ್ರಜ್ಞರ ಹುದ್ದೆಯನ್ನು ಭರ್ತಿ ಮಾಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಜಿಲ್ಲಾ ಸಂಘದ ಅಧ್ಯಕ್ಷ ಮ.ಸ.ನಂಜುಂಡಸ್ವಾಮಿ, ತಾ. ಘಟಕ ಅಧ್ಯಕ್ಷ ಕೆ.ಅರುಣಕುಮಾರ್, ಕಾರ್ಯದರ್ಶಿ ವೈ.ಮೋಹನ್, ಜಿಲ್ಲಾ ಪ್ರತಿನಿಧಿ ಡಾ.ಎ.ಜಿ.ಶ್ರೀನಿವಾಸ್, ತಾ. ವೈದ್ಯಾಧಿಕಾರಿ ಡಾ.ಕೆ.ಪಿ.ಅಚ್ಚುತ್, ಸಿವಿಲ್ ಸರ್ಜನ್ ಡಾ.ಬಿ.ಜಿ.ಸಂಗಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜನಾಯ್ಕ್ ಇನ್ನಿತರರು ಇದ್ದರು.