ಕಲ್ಲು ಗಣಿಗಾರಿಕೆ ಲೈಸನ್ಸ್ ನವೀಕರಿಸಿ
ಜಿಲ್ಲಾಧಿಕಾರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಸೂಚನೆ
ಶಿವಮೊಗ್ಗ: ಗೆಜ್ಜೇನಹಳ್ಳಿ, ಕಲ್ಲುಗಂಗೂರು, ದೇವಕಾತಿಕೊಪ್ಪ ಸುತ್ತಮುತ್ತ ಅಧಿಕೃತ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ಪರವಾನಗಿ ನವೀಕರಿಸುವಂತೆ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.
ಸೋಮವಾರ ಕಚೇರಿಗೆ ಕಲ್ಲು ಕ್ವಾರಿ ಮಾಲೀಕರೊಂದಿಗೆ ಆಗಮಿಸಿದ ಅವರು ಜಿಲ್ಲಾಧಿಕಾರಿ ಜತೆ ಚರ್ಚಿಸಿದರು. ಪರವಾನಿಗೆಗಾಗಿ 120 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆ ಸಮನ್ವಯ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಕಳೆದ 2-3 ವರ್ಷದಿಂದ ಯಾವ ಕೆಲಸವೂ ಆಗಿಲ್ಲ ಎಂದ ಅವರು ಕೂಡಲೇ ಅರಣ್ಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಿ ಪರಿಹಾರ ಕಂಡುಹಿಡಿಯಿರಿ ಎಂದು ತಿಳಿಸಿದರು.
ಇದಕ್ಕೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ನಡೆಸುತ್ತಿರುವ ಜಂಟಿ ಸರ್ವೆ ಕೆಲವೇ ತಿಂಗಳಲ್ಲಿ ಅಂತಿಮವಾಗಲಿದ್ದು, ನಂತರ ಪರವಾನಗಿ ನೀಡಲಾಗುವುದು ಎಂದರು.
ಆಗ ಈಶ್ವರಪ್ಪ ಅವರು, ಕಾನೂನುಬಾಹಿರ ಕ್ವಾರಿ ಪರವಾಗಿ ನಾವು ಇಲ್ಲ. ಆದರೆ ಕಾನೂನು ಬದ್ಧ ಕ್ವಾರಿಗಳಿಗೆ ತೊಂದರೆ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಕ್ವಾರಿ ಮಾಲೀಕ ಎನ್. ಮಂಜುನಾಥ್, ಸೋಮಸುಂದರಂ ಹಲವರು ತಮ್ಮ ಅಹವಾಲು ಮಂಡಿಸಿದರು. ಕಲ್ಲುಕ್ವಾರಿ ಹಿತರಕ್ಷಣಾ ಸಮಿತಿ ಪರವಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.