ಸಾಗರ- ಹೊಸನಗರಗಳಲ್ಲಿ ರು. 100 ಕೋಟಿಗೂ ಹೆಚ್ಚಿನ ನಷ್ಟ ಅಂದಾಜು
ಶಿವಮೊಗ್ಗ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಿಂದಾಗಿ ರಸ್ತೆ, ಸೇತುವೆಗಳು ಕೊಚ್ಚಿಹೋಗಿದ್ದು, ಸಾಕಷ್ಟು ನಷ್ಟ ಸಂಭವಿಸಿದೆ. ಗದ್ದೆಗಳ ಮೇಲೆ ಮಣ್ಣು ಕೂತಿದೆ, ತೋಟಗಳಿಗೆ ಹಾನಿಯಾಗಿದ್ದು, ಕೃಷಿಕರಿಗೂ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟ ತುಂಬಲು ಹೆಚ್ಚಿನ ಹಣಕಾಸು ನೆರವು ಅಗತ್ಯವಿದೆ. ಹೀಗಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ಸೋಮವಾರ ತೀರ್ಥಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನಲ್ಲಿ ಹೆಚ್ಚಿನ ಮಳೆ ಸುರಿದ ಪರಿಣಾಮ ಆಸ್ತಿ ಪಾಸ್ತಿ ನಷ್ಟವಾಗಿದೆ. ತೀರ್ಥಹಳ್ಳಿ ತಾಲೂಕೊಂದರಲ್ಲೇ ಪ್ರಾಥಮಿಕ ಮಾಹಿತಿಯಂತೆ ರು. 30-35 ಕೋಟಿ ಯಷ್ಟು ನಷ್ಟ ಸಂಭವಿಸಿದೆ. ಸಾಗರ- ಹೊಸನಗರ ಭಾಗದ ನಷ್ಟದ ಮಾಹಿತಿಯಂತೆ ಒಟ್ಟಾರೆ ರು. 100 ಕೋಟಿಗೂ ಹೆಚ್ಚಿನ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ ಎಂದರು.
ಮುಖ್ಯಮಂತ್ರಿಯವರಿಗೆ ಈ ವಿಚಾರದಲ್ಲಿ ನಾನು ಖುದ್ದು ಗಮನ ಸೆಳೆಯುತ್ತೇನೆ. ಜಿಲ್ಲಾಡಳಿತ ಕೂಡ ನಷ್ಟದ ಅಂದಾಜನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವಿವರಿಸುತ್ತದೆ. ಸೇತುವೆ, ರಸ್ತೆಯನ್ನು ಪುನರ್ ನಿರ್ಮಿಸಲು ಹೆಚ್ಚಿನ ಅನುದಾನ ಬೇಕಾಗುತ್ತದೆ. ಈ ವಿಚಾರದಲ್ಲಿ ವಿಶೇಷ ಪ್ರಯತ್ನ ಹಾಕುವುದಾಗಿ ತಿಳಿಸಿದರು.
ಡಿಸಿಸಿಬಿ: ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಸರ್ಕಾರ ತನ್ನ ಪಾಲಿನ ಕೆಲಸ ಮಾಡುತ್ತಿದೆ. ಸರ್ಕಾರ ಸಿಐಡಿ ತನಿಖೆಗೆ ನೀಡಿದೆ. ತನಿಖೆ ನಡೆಯಲಿ. ನಾನು ತನಿಖೆಯಲ್ಲಿ ಹಸ್ತ ಕ್ಷೇಪ ಮಾಡುವುದಿಲ್ಲ. ಹಾಗೆಯೇ ದುರುದ್ದೇಶ ಕೂಡ ಇಲ್ಲ. ನ್ಯಾಯಬದ್ಧವಾಗಿ ತನಿಖೆ ನಡೆಯಲಿ ಎಂದ ಅವರು, ಈ ವಿಚಾರದಲ್ಲಿ ತಾವು ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ ಎಂದರು.
ಬ್ಯಾಂಕ್ ಹಿತದೃಷ್ಟಿಯಿಂದ ವಾಸ್ತವ ಸ್ಥಿತಿಯನ್ನು ಗ್ರಾಹಕರಿಗೆ ತಿಳಿಸುವಂತೆ ಡಿಸಿ, ಎಸ್ಪಿ ಹಾಗೂ ಬ್ಯಾಂಕಿನ ಎಂಡಿಯವರಿಗೆ ಸೂಚಿಸಿರುವುದಾಗಿ ಹೇಳಿದ ಅವರು, ಬಣ್ಣದ ಲೆಕ್ಕಾಚಾರ ಹಾಕುವ ಬದಲು ವಸ್ತು ಸ್ಥಿತಿ ಗ್ರಾಹಕರಿಗೆ ತಿಳಿಸಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯವೆಂದರು.