ಪಟಗುಪ್ಪ ಸೇತುವೆ ಕಾಮಗಾರಿಗೆ ಮುಕ್ತಿ ಎಂದು?
ಕ.ಪ್ರ.ವಾರ್ತೆ,ಹೊಸನಗರ,ಫೆ.3
ಸಂತ್ರಸ್ತ ಗ್ರಾಮಗಳ ಹಲವು ವರ್ಷಗಳ ಬೇಡಿಕೆಯಾದ ಪಟಗುಪ್ಪ ಸೇತುವೆ ಸುಮಾರು 28 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರ ಮನಸ್ಸು ಮಾಡಿದ್ದು ನಿಜ. ಹಾಗೆಯೇ ಭಾರೀ ಪ್ರಚಾರದೊಂದಿಗೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದೂ ಹೌದು.
ಆದರೆ, ಕಾಮಗಾರಿ ಪ್ರಾರಂಭಗೊಂಡು 7 ರಿಂದ 8 ವರ್ಷ ಕಳೆದರೂ ಇನ್ನು ಶೇ.50 ರಷ್ಟು ಕಾಮಗಾರಿ ಪೂರ್ಣಗೊಳ್ಳದಿರುವುದು ಸುಗಮ ಸಂಪರ್ಕಕ್ಕೆ ಹಾತೊರೆಯುತ್ತಿರುವ ಕುಟುಂಬಗಳ ಭ್ರಮನಿರಶನಕ್ಕೆ ಕಾರಣವಾಗಿದೆ.
ಪಟಗುಪ್ಪ ಸೇತುವೆ ನಿರ್ಮಾಣದ ಕನಸು ಮತ್ತು ಮಾತು 5 ದಶಕದಿಂದಲೂ ಕೇಳಿಬರುತ್ತಿದೆ. ಪಟಗುಪ್ಪ ಸುತ್ತಮುತ್ತಲಿನ ಗ್ರಾಮಸ್ಥರ ನಿರಂತರ ಹೋರಾಟದ ಫಲವಾಗಿ ಸರ್ಕಾರ ಕಣ್ತೆರೆದು 7 ವರ್ಷಗಳ ಹಿಂದೆ ಪಟ್ಟಗುಪ್ಪ ಸೇತುವೆ ನಿರ್ಮಾಣಕ್ಕೆ ಕೈ ಹಾಕಿತು. ಸುಮಾರು 28 ಕೋಟಿ ವೆಚ್ಚದ ಸೇತುವೆ ನಿರ್ಮಾಣದ ಶಿಲಾನ್ಯಾಸ ಏನೋ ಲಗುಬಗೆಯಿಂದ ನೆರವೇರಿತು. ಆದರೆ, ಕಾಮಗಾರಿ ಪಾತ್ರ ಪೂರ್ಣಗೊಳ್ಳುವುದಿರಲಿ ಕಾಮಗಾರಿಯಲ್ಲಿ ಕನಿಷ್ಠ ಪ್ರಗತಿ ಕೂಡ ಇಂದಿಗೂ ಸಾಧ್ಯವಾಗಿಲ್ಲ.
ಅದಕ್ಕೆ ಕಾರಣ ಕೂಡ ಇಲ್ಲದಿಲ್ಲ. ಜೂನ್ ತಿಂಗಳು ಬಂತೆಂದರೆ ಮಳೆಗಾಲ ಪ್ರಾರಂಭವಾಗಿ ಹಿನ್ನೀರು ಏರುತ್ತದೆ. ಏರಿದ ಹಿನ್ನೀರು ಇಳಿಯಬೇಕಾದರೆ ಫೆಬ್ರವರಿ ಅಂತ್ಯ ಕಾಣುತ್ತದೆ. ಉಳಿದ 3 ತಿಂಗಳಲ್ಲಿ ಕಾಮಗಾರಿ ನಡೆಸಬೇಕು. ಮಾತ್ರವಲ್ಲ ಕಾಮಗಾರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸದಿರುವುದು ಒಂದಾದರೆ ಕಾಮಗಾರಿ ಅನುಷ್ಠಾನಗೊಂಡು ಇಲ್ಲಿಯವರೆಗಿರುವ ರಾಜಕೀಯ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಜೊತೆಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ಪಟಗುಪ್ಪದ ಅನಿವಾರ್ಯತೆ: ಪಟಗುಪ್ಪ ಸೇತುವೆ ಬೇಡಿಕೆ ಇಂದು ನಿನ್ನೆಯದಲ್ಲ. ಸರಿಸುಮಾರು 5 ದಶಕದ ಬೇಡಿಕೆ. 1944ರ ಸುಮಾರಿ ಮಡೇನೂರು ಡ್ಯಾಂ ನಿರ್ಮಾಣಗೊಂಡಾಗ ಪಟ್ಟಗುಪ್ಪದಲ್ಲಿದ್ದ ಸೇತುವೆ ಮುಳುಗಿತು. ಆಗ ಸಂಪರ್ಕಕ್ಕೆ ಪರದಾಟ ಕಂಡು ಸೇತುವೆ ಅಭಿವೃದ್ಧಿಪಡಿಸಿ ಏರಿಸಲಾಯಿತು. ತದನಂತರ 1965ರ ಸುಮಾರಿಗೆ ಲಿಂಗನಮಕ್ಕಿ ಡ್ಯಾಂ ನಿರ್ಮಾಣಗೊಂಡ ನಂತರ ಅಭಿವೃದ್ಧಿಗೊಂಡ ಸೇತುವೆ ಕೂಡ ಪೂರ್ಣ ಪ್ರಮಾಣದಲ್ಲಿ ಮುಳುಗಡೆಗೆ ತುತ್ತಾಗಿದ್ದು ಮತ್ತೆ ಸಂಪರ್ಕ ಪರದಾಟ ಮೇಳೈಸಿತು. ಅಲ್ಲಿಂದಲೂ ನೂತನ ಮತ್ತು ಸುಸಜ್ಜಿತ ಸೇತುವೆ ಬೇಡಿಕೆ ಕೇಳಿ ಬರುತ್ತಿತ್ತು.
ಸುಗಮ ಸಂಪರ್ಕ: ಹೊಸನಗರದಿಂದ ಸಾಗರದಿಂದ ಹತ್ತಿರದಿಂದ ಸಂಪರ್ಕ ಸಾಧಿಸಲು ಪಟಗುಪ್ಪ ಸೇತುವೆ ಮುಖ್ಯಪಾತ್ರ ವಹಿಸುತ್ತದೆ. ಈಗಿನ ಮಾರ್ಗದ ಪ್ರಕಾರ ಸುಮಾರು ಕನಿಷ್ಠ 15 ರಿಂದ 20 ಕಿ.ಮೀ. ಉಳಿಯುತ್ತದೆ. ದೂರದ ಮಂಗಳೂರು, ಉಡುಪಿ ಕೊಲ್ಲೂರು ಭಾಗದಿಂದ ಬರುವ ವಾಹನಗಳು ಅತೀ ಕಡಿಮೆ ಅವಧಿಯಲ್ಲಿ ಸಾಗರ ಸಂಪರ್ಕಿಸಬಹುದು. ಮುಳುಗಡೆಯಿಂದ ಸಂತ್ರಸ್ತ ಪ್ರದೇಶಗಳಾಗಿ ಹೊರಹೊಮ್ಮಿ ಕುಗ್ರಾಮದಂತಾದ ಪ್ರದೇಶಗಳಿಗೆ ಈ ಸಂಪರ್ಕ ತುರ್ತು ಮತ್ತು ಅತ್ಯಂತ ಅಗತ್ಯವಾಗಿದೆ. ಆದರೆ ಬೇಡಿಕೆಗೆ ಪೂರಕವಾಗಿ ಸೇತುವೆ ಮಂಜೂರಾಗಿ ಏಳೆಂಟು ವರ್ಷ ಕಳೆದರೂ ಕೂಡ ಅರ್ಧದಷ್ಟು ಕಾಮಗಾರಿ ಮುಗಿಯದಿರುವುದು ಸಾಕಷ್ಟು ಅಸಮಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಹೋರಾಟಗಳನ್ನು ವರ್ಷಂಪ್ರತಿ ಮಾಡುತ್ತಾ ಬಂದಿದ್ದರೂ ಕೂಡ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಆಗಬೇಕಾಗಿದ್ದೇನು?: ಕಾಮಾಗಾರಿ ಕೈಗೆತ್ತಿಗೊಂಡಿರುವ ಕೆಎಸ್ಆರ್ಡಿಸಿಎಲ್ ಕಾಮಗಾರಿ ಬಗ್ಗೆ ತನ್ನ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕಾಮಗಾರಿ ನಿರ್ವಹಿಸುತ್ತಿರುವ ಸಿಸಿಸಿಎಲ್ ಕಂಪನಿ ಕಾಮಗಾರಿಗೆ ಚುರುಕು ಮುಟ್ಟಿಸಬೇಕು.
ಆದಷ್ಟು ಆಧುನಿಕ ತಂತ್ರಜ್ಞಾನ ಅಳವಡಿಸಬೇಕು. ಮಳೆ ಬರುವಾಗಲು ಮತ್ತು ಹಿನ್ನೀರು ಇರುವಾಗಲು ಕಾಮಗಾರಿ ನಿರ್ವಹಿಸುವ ವ್ಯವಸ್ಥೆ ಮಾಡಬೇಕು.
- ರವಿ ಬಿದನೂರು