'ಅರ್ಹರ ಆಯ್ಕೆಗೆ ಆದ್ಯತೆ ನೀಡಿ'
ಹೊಸನಗರ: ಗ್ರಾಮ ಸಹಾಯಕರ ನೇಮಕದಲ್ಲಿ ಲಾಭಿ ಮಾತು ಕೇಳಿ ಬರುತ್ತಿದ್ದು, ಅದಕ್ಕೆ ಅವಕಾಶ ನೀಡದೆ ಅರ್ಹರಿಗೆ ಅವಕಾಶ ನೀಡುವಂತೆ ತಾಲೂಕಿನ ಕರಿಮನೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸ್ಥಳೀಯರು, ಗ್ರಾಮ ಸಹಾಯಕ ಹುದ್ದೆಗಾಗಿ ಲಾಭಿ ನಡೆಸುತ್ತಿರುವ ಕೆಲವರು ಸುಳ್ಳು ಮಾಹಿತಿ ನೀಡಿದ್ದು ಅಧಿಕಾರಿಗಳನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಪಾರದರ್ಶಕವಾಗಿ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
7ನೇ ತರಗತಿ ವ್ಯಾಸಾಂಗ ಮಾಡಿರುವ ಮತ್ತು ಕಡಿಮೆ ವರಮಾನ ಹೊಂದಿರುವವರಿಗೆ ಆದ್ಯತೆ ನೀಡಬೇಕಿದ್ದು, ಅದಕ್ಕಾಗಿ ಸುಳ್ಳು ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ ಕೆಲವರು ರಾಜಕೀಯ ಲಾಬಿ ಮಾಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡಬಾರದು ಎಂದು ವಿನಂತಿಸಿದ್ದಾರೆ. ಸಾಗರ ಕ್ಷೇತ್ರದಲ್ಲಿ ಈ ಬಗ್ಗೆ ವಿವಾದ ಎದ್ದು ಅರ್ಹ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಕರಿಮನೆ ಮತ್ತು ಇತರ ಭಾಗದಲ್ಲಿ ಅನರ್ಹರಿಗೆ ಮಣೆ ಹಾಕಿದಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಸಿದ್ದು, ಇದ್ಯಾವುದಕ್ಕೂ ಆಸ್ಪದ ನೀಡದೆ ಯಾರು ಅರ್ಹ ಎಂದು ಪರಿಶೀಲಿಸಿ ಆಯ್ಕೆ ಮಾಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.
ಜೆಡಿಎಸ್ ಬೆಂಬಲಿಸಲು ಶ್ರೀಪಾದ ಮನವಿ
ಕ.ಪ್ರ.ವಾರ್ತೆ, ತ್ಯಾಗರ್ತಿ, ಫೆ. 5
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವುದರೊಂದಿಗೆ ಬಂಗಾರಪ್ಪನವರ ಅತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕೆಂದು ಸಾಗರ ತಾಲೂಕು ಜೆಡಿಎಸ್ ಉಸ್ತುವಾರಿ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀಪಾದ ಹೆಗಡೆ ನಿಸರಾಣಿ ಕರೆ ನೀಡಿದರು.
ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಚಡಿ, ಚಿಕ್ಕ ಬಿಲಗುಂಜಿ, ವೀರಾಪುರ, ಹೊಸಂತೆ ಗ್ರಾಮದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದ ಅವರು, ಇಂದಿನ ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ಬತ್ತ, ಜೋಳದ ಬೆಳೆಗಾರರಿಗೆ ಸಮರ್ಪಕವಾಗಿ ಯೋಗ್ಯ ಬೆಲೆ ನೀಡದೆ ರೈತರನ್ನು ಆತಂಕದಲ್ಲಿ ಇರಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಅಡಕೆ ನಿಷೇಧಿಸಲು ಮುಂದಾಗಿದ್ದು, ಅಡಕೆ ಬೆಳೆಗಾರರನ್ನು ಸಂಕಷ್ಟದ ಸ್ಥಿತಿಗೆ ನೂಕುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ರಚಿಸುವ ಸಾಧ್ಯತೆಗಳು ನಿಚ್ಚಳವಾಗಿದೆ. ಅದರಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿರುವುದರಿಂದ ರಾಜ್ಯದಲ್ಲಿ ಹೆಚ್ಚಿನ ಜೆಡಿಎಸ್ ಸಂಸದರನ್ನು ಗೆಲ್ಲಿಸಿ ಕನಿಷ್ಠ 20 ಸ್ಥಾನ ಗಳಿಸುವುದರೊಂದಿಗೆ ದೇವೇಗೌಡರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಸಾಗರ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ್ ಬೈದೂರು, ಮುಖಂಡರಾದ ಗುರುನಾಥ ಗೌಡ ವೀರಾಪುರ, ಕನ್ನಪ್ಪ ಬೆಳಲ್ಮಕ್ಕಿ, ಸ್ಥಳೀಯ ಹೊಸಂತೆ ಗ್ರಾಮಸ್ಥರಾದ ರಮೇಶ್.ಟಿ, ಕೃಷ್ಣಮೂರ್ತಿ, ರಾಧಾಕೃಷ್ಣ, ರವಿ, ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.