ದೇವಸ್ಥಾನ ನಿರ್ಮಾಣಕ್ಕೆ ಚಾಲನೆ
ಸಾಗರ: ಪಟ್ಟಣದ ಶ್ರೀಮಹಾಗಣಪತಿ ದೇವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗೆ ಬುಧವಾರ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಶಿಲೆಕಲ್ಲಿಗೆ ಸುತ್ತಿಗೆಯಿಂದ ಹೊಡೆಯುವ ಮೂಲಕ ಚಾಲನೆ ನೀಡಿದರು.
600 ವರ್ಷಗಳ ಇತಿಹಾಸವಿರುವ ಮಹಾಗಣಪತಿ ದೇವಸ್ಥಾನವನ್ನು ಅತ್ಯಂತ ಸುಂದರವಾಗಿ ನಿರ್ಮಿಸುವ ಕುರಿತು ನೀಲನಕ್ಷೆ ಸಿದ್ಧವಾಗಿದೆ. ಪ್ರಥಮ ಹಂತದಲ್ಲಿ 67 ಲಕ್ಷ ವೆಚ್ಚದಲ್ಲಿ ಚಂದ್ರಶಾಲೆ ನಿರ್ಮಾಣವಾಗಲಿದೆ. ದೇವಸ್ಥಾನದ ಮುಖಮಂಟಪ ಗೋಪುರ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿದೆ. 50 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಹಿಂಭಾಗದ ಪಾಕಶಾಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಸಭಾಭವನ ನವೀಕರಣಕ್ಕೂ ಶೀಘ್ರದಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಿನ ರಸ್ತೆಯಿಂದಲೆ ದೇವಸ್ಥಾನ ಪ್ರವೇಶಕ್ಕೆ ಅನುಕೂಲವಾಗುವಂತೆ ಮಹಾದ್ವಾರ ನಿರ್ಮಿಸುವ ಉದ್ದೇಶ ಹೊಂದಿದೆ. ಹಳೇ ತಾಲೂಕು ಕಚೇರಿಕೆಡವಿ ಅಲ್ಲಿ ವಿವಿಧ ಅಭಿವೃದ್ಧಿ ಕೆಲಸಕೈಗೊಳ್ಳಲಾಗುವುದು. ಕಾರ್ಕಳದ ಮಂಜುನಾಥ ಎಂಬ ಶಿಲ್ಪಿ ದೇವಸ್ಥಾನದ ಪುನರ್ ನಿರ್ಮಾಣ ಕೆಲಸವನ್ನು ನಿರ್ವಹಿಸುತ್ತಿದ್ದು, ನಿರ್ಮಿತಿ ಕೇಂದ್ರ ಈ ಕಾಮಗಾರಿಯ ಮೇಲುಸ್ತುವಾರಿ ವಹಿಸಲಿದೆ ಎಂದರು.
ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ ಮಾತನಾಡಿದರು. ಸಾಗರ ಸಾಮಿಲ್ ಮಾಲೀಕ ಯು.ಸಿ.ಶ್ರೀಧರ್ ದೇವಸ್ಥಾನದ ಪ್ರಧಾನ ಬಾಗಿಲು ದೇಣಿಗೆಯಾಗಿ ನೀಡುವ ಭರವಸೆ ನೀಡಿದರು. ತಹಸೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲ, ಜಿಲ್ಲಾ ಪರಿಷತ್ ಇಂಜಿನಿಯರಿಂಗ್ ವಿಭಾಗದ ವೆಂಕಟೇಶ್, ನಿರ್ಮಿತಿ ಕೇಂದ್ರದ ಜಿ.ಆರ್. ಈಶ್ವರಪ್ಪ, ನಗರಸಭೆ ಸದಸ್ಯ ತೀ.ನ. ಶ್ರೀನಿವಾಸ್, ಕೆ. ಹೊಳೆಯಪ್ಪ, ಡಿ.ದಿನೇಶ್ ಹಾಜರಿದ್ದರು.