'ಸಾರಿಗೆ ಬಸ್ ಯೋಜನೆ ಅನುಷ್ಠಾನಗೊಳಿಸಿ'
ಶಿವಮೊಗ್ಗ: ಕೇಂದ್ರ ಸರ್ಕಾರದ ಜೆ ನರ್ಮ್ ಯೋಜನೆಯಡಿ ನಗರ ಸರ್ಕಾರಿ ಸಾರಿಗೆ ಬಸ್ ಸಂಚಾರ ಹೋರಾಟಕ್ಕೆ ವಿದ್ಯಾರ್ಥಿಗಳೂ ಧುಮುಕಿದ್ದು, ಶಿವಮೊಗ್ಗ ಯುವಜನ ಹೋರಾಟ ವೇದಿಕೆ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ನಗರಕ್ಕೆ 65 ಹಾಗೂ ಭದ್ರಾವತಿ ನಗರಕ್ಕೆ 35 ನಗರ ಸರ್ಕಾರಿ ಸಾರಿಗೆ ಬಸ್ಗಳು ಮಂಜೂರಾಗಿದ್ದು, ಈ ಯೋಜನೆಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಶಿಬಿರಗಳು ಹಮ್ಮಿಕೊಳ್ಳಲಿ: ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ಮೂಲಕ ಸಾಗಿಬಂದ ನೂರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು. ಸರ್ಕಾರಿ ನಗರ ಸಾರಿಗೆ ಬಸ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ವಯೋವೃದ್ಧರಿಗೆ ರಿಯಾಯಿತಿ ದೊರೆಯಲಿದೆ. ಇದು ಎಲ್ಲಾ ಬಡ ಮತ್ತು ಕೆಳವರ್ಗದ ಪ್ರಯಾಣಿಕರಿಗೆ ಅನುಕೂಲಕರ. ಜಿಲ್ಲಾಡಳಿತ ಈ ಯೋಜನೆ ಅನುಷ್ಠಾನಕ್ಕೆ ಪೂರಕ ವ್ಯವಸ್ಥೆಗಳಾದ ಬಸ್ ಟರ್ಮಿನಲ್, ಡಿಪೋ ಹಾಗೂ ವರ್ಕ್ಶಾಪ್ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ ಪರಿಶೀಲಿಸಿ ತಯಾರಿಸಿರುವ 65 ಸಂಚಾರ ಮಾರ್ಗಗಳ ಪಟ್ಟಿಯನ್ನು ಅನುಮೋದಿಸಿ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಯಾವುದೇ ಲಾಬಿಗೆ ಮಣಿಯದೇ ಸಾರ್ವಜನಿಕರ ಅನುಕೂಲ ಒದಗಿಸಬೇಕು. ವಿದ್ಯಾರ್ಥಿಗಳು ಸಂಚರಿಸಲು ರಿಯಾಯಿತಿ ದರದಲ್ಲಿ ಮಾಸಿಕ, ವಾರ್ಷಿಕ ಬಸ್ ಪಾಸ್ ನೀಡಬೇಕು ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ನಾಗರಿಕ ಹಿತರಕ್ಷಣಾ ವೇದಿಕೆ, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಕಲ್ಲೂರು ಮೇಘರಾಜ್, ಅಶೋಕ್ ಯಾದವ್, ರಮೇಶ್ ಗೌಡ, ಸುವರ್ಣ ನಾಗರಾಜ್, ಉಂಡಿಗನಾಳು ರಾಜಗೋಪಾಲ್, ಮಧುಸೂದನ್, ಚೇತನ್, ಕಡ್ಲೆಕಾಯಿ ಮಂಜುನಾಥ್ ಸೇರಿದಂತೆ ಹಲವರು ಬೆಂಬಲಿಸಿ ಭಾಗವಹಿಸಿದ್ದರು. ಯುವಜನ ಹೋರಾಟ ವೇದಿಕೆಯ ಶ್ರೀಜಿತ್, ಸಂತೋಷ್, ಬಾಲಾಜಿ, ಬಾಷಾ, ಸೈದು ಸಾಬ್, ರಾಕೇಶ್, ಸತೀಶ್, ಚಂದ್ರು, ಶಿವಶಂಕರ್, ಮಹೇಂದ್ರ ಮತ್ತಿತರರು ಭಾಗವಹಿಸಿದ್ದರು.