ತಂಬಾಕು ಬಗ್ಗೆ ಜಾಗೃತಿ ಅಗತ್ಯ
ಕ.ಪ್ರ.ವಾರ್ತೆ, ಶಿಕಾರಿಪುರ, ಫೆ.6
ದೇಹಕ್ಕೆ ಅತಿ ಹೆಚ್ಚಿನ ಹಾನಿ ಉಂಟುಮಾಡುವ ತಂಬಾಕು ಪದಾರ್ಥಗಳ ಸೇವನೆ ನಿರ್ಮೂಲನೆ ಕೇವಲ ಆರೋಗ್ಯ ಇಲಾಖಾಧಿಕಾರಿಗಳ ಕರ್ತವ್ಯ ಮಾತ್ರವಲ್ಲದೆ ಸಾರ್ವಜನಿಕರು ಈ ದಿಸೆಯಲ್ಲಿ ಪದಾರ್ಥಗಳ ಸೇವನೆ ತ್ಯಜಿಸುವಂತೆ ಸೂಕ್ತ ಜಾಗೃತಿ ಉಂಟುಮಾಡಬೇಕಾಗಿದೆ ಎಂದು ಇಲ್ಲಿನ ದಂಡಾಧಿಕಾರಿ ಧರ್ಮೋಜಿರಾವ್ ತಿಳಿಸಿದರು.
ಗುರುವಾರ ಸಂಜೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆ ಮುಖಂಡರಿಗೆ ನಡೆದ ತಂಬಾಕು ನಿಷೇಧ ಕಾಯ್ದೆ ಮಾಹಿತಿ ಸಭೆಯ ಅಧ್ಯಕತ್ಷೆ ವಹಿಸಿ ಅವರು ಮಾತನಾಡಿದರು.
ವೈದ್ಯರು ಕಾಯಿಲೆಗೆ ಮಾತ್ರ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವ ಅಧಿಕಾರ ಹೊಂದಿದ್ದು, ಸಾರ್ವಜನಿಕರು ಸಾಮಾಜಿಕ ಹಾನಿ ಬಗ್ಗೆ ಎಚ್ಚರಿಕೆ ಉಂಟುಮಾಡಿ ಮನಪರಿವರ್ತನೆಗೊಳಿಸುವ ಅಧಿಕಾರ ಹೊಂದಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಂಬಾಕು ಸೇವಿಸುವ ವ್ಯಕ್ತಿಗಳನ್ನು ಹಾನಿಯ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಸುವ ಬಹು ಮಹತ್ತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಸದೃಢ ದೇಶ ನಿರ್ಮಾಣಕ್ಕೆ ಪಣತೊಡಬೇಕಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ತಿಪ್ಪೇಶ್ ಮಾತನಾಡಿದರು. ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ಶಿವಮಲ್ಲಯ್ಯ, ಚಂದ್ರಶೇಖರ್, ಕೃಷಿ ಇಲಾಖೆ ಅಧಿಕಾರಿ ಕಿರಣಕುಮಾರ್, ಪಶು ವೈದ್ಯಾಧಿಕಾರಿ ಡಾ. ಬಸವೇಶ ಹೂಗಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಿನ್ನಪ್ಪ, ತಾಲೂಕು ಅಕ್ಷರ ದಾಸೋಹ ಸಮಿತಿ ನಿರ್ದೇಶಕ ದೇನ್ಯಾನಾಯ್ಕ, ಕಸಾಪ ಅಧ್ಯಕ್ಷ ಸುದರ್ಶನ ಶಿವರಂಜಿನಿ, ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮೊದಲಾದವರು ಉಪಸ್ಥಿತರಿದ್ದರು.
15ರಿಂದ ಕಾಲುಬಾಯಿ ರೋಗಕ್ಕೆ ಲಸಿಕೆ
ಸಾಗರ: ಇಲ್ಲಿನ ಪಶು ಸಂಗೋಪನಾ ಇಲಾಖೆ ತಾಲೂಕಿನಾದ್ಯಂತ ಫೆ.15ರಿಂದ ಮಾ.14ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ಧ ಲಸಿಕೆ ನೀಡುವ ರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ತಾಲೂಕಿನಲ್ಲಿ ಸುಮಾರು 7 ತಂಡಗಳು ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ. ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ಸದ್ಯದಲ್ಲಿಯೆ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಪ್ರಕಟಿಸಲಾಗುವುದು.
ಕಾಲುಬಾಯಿ ರೋಗವು ವೈರಸ್ ರೋಗಾಣುಗಳಿಂದ ಹರಡುತ್ತಿದ್ದು, ಜಾನುವಾರುಗಳಿಗೆ ತೀವ್ರವಾಗಿ ಬಾಧಿಸಿ, ಅತೀವ ಸಂಕಟವನ್ನು ಉಂಟು ಮಾಡುತ್ತದೆ. ರೋಗ ತಡೆಗೆ ಲಸಿಕೆಯೊಂದೇ ಪರಿಹಾರವಾಗಿದೆ.
ಲಸಿಕೆ ನೀಡುವ ದಿನದಂದು ಎಲ್ಲಾ ಜಾನುವಾರು ಮಾಲೀಕರು ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಕಾರ್ಯಕ್ರಮ ಯಶಸ್ಸು ಗಳಿಸಿಕೊಡಬೇಕೆಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್. ಕಲ್ಲಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.