ತೀರ್ಥಹಳ್ಳಿಯಲ್ಲಿ ವಾಲಿ ಲೀಗ್
ಶಿವಮೊಗ್ಗ: ಕರ್ನಾಟಕ ವಾಲೀ ಲೀಗ್ನ ಮೂರನೇ ಹಂತದ ಲೀಗ್ ಪಂದ್ಯಾವಳಿಗಳು ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಫೆ.19ರಿಂದ 23ರವರೆಗೆ ನಡೆಯಲಿದೆ.
ಗುರುವಾರ ಪಂದ್ಯಾವಳಿ ಕುರಿತು ಮಾಹಿತಿ ನೀಡಿದ ಜಿಲ್ಲಾ ಒಲಂಪಿಕ್ ಅಸೋಸಿಯೇಷನ್ ಪೋಷಕ ಹಾಗೂ ಅಪೆಕ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಕೊಡಚಾದ್ರಿ ಕಪ್-2014ರ ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಕ್ರೀಡಾ ಹಾಸ್ಟೆಲ್ ಬೆಂಗಳೂರು, ಜೆಎಸ್ಡಬ್ಲ್ಯು ಬಳ್ಳಾರಿ, ಪೋಸ್ಟಲ್ ಇಂಡಿಯಾ, ಕರ್ನಾಟಕ ವಾಲಿಬಾಲ್ ಕ್ಲಬ್ ಬೆಂಗಳೂರು, ಬಿಎಸ್ಎನ್ಎಲ್ ಬೆಂಗಳೂರು, ಎಂಇಜಿ ಬೆಂಗಳೂರು ತಂಡಗಳು ಸೆಣಸಲಿದ್ದು, ಪ್ರತಿ ದಿನ ಸಂಜೆ 5 ಗಂಟೆಯಿಂದ ಪಂದ್ಯ ಶುರುವಾಗಲಿದೆ. ಹೊನಲು ಬೆಳಕಿನಲ್ಲಿ ಲೀಗ್ ಮಾದರಿಯಲ್ಲಿ ನಡೆಯಲಿವೆ ಎಂದರು.
ಒಲಂಪಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶಶಿ ಮಾತನಾಡಿ, ಭಾರತ ಸೀನಿಯರ್ ತಂಡ
ಹಾಗೂ ಭಾರತ ಜ್ಯೂನಿಯರ್ ತಂಡವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.
ಪ್ರಮುಖವಾಗಿ ಭಾರತ ತಂಡದ ನಾಯಕರಾಗಿದ್ದ ಗುರುವೀಂದರ್ ಸಿಂಗ್, ಹರ್ವೀಂದ್ರ ಪಾಲ್ಸಿಂಗ್, ಅನೂಪ್ ಡಿಕಾಸ್ಟ, ಪ್ರದೀಪ್, ಜಿಲ್ಲೆಯವರೇ ಆದ ವಿಕ್ರಂ, ಶ್ರವಣ್ ರಾವ್ ಪ್ರಮುಖ ತಾರಾ ಆಕರ್ಷಣೆ ಎಂದರು.
ಐದು ದಿನಗಳಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯ ವಿಜೇತರಿಗೆ ಪ್ರತಿ ಪಂದ್ಯಕ್ಕೆ ರು. 5,000 ಬಹುಮಾನ ನೀಡಲಾಗುವುದು. ಸುಮಾರು 20 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ಉಚಿತ ವಸತಿ, ಊಟದ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆ ಈ ಪಂದ್ಯಾವಳಿಗೆ ರು. 10 ಲಕ್ಷ ವೆಚ್ಚವಾಗುತ್ತದೆ ಎಂದರು. ಐದು ಹಂತಗಳಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯ 3ನೇ ಹಂತ ಮಾತ್ರ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಉಳಿದೆಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿದೆ. ಸುದ್ದಿಗೋಷ್ಠಿಯಲ್ಲಿ ಸುಧೀರ್, ನಾಗೇಂದ್ರ ಜೋಯಿಸ್, ಭಾಸ್ಕರ್ ಕಾಮತ್, ಪ್ರದೀಪ್ ಮೊದಲಾದವರು ಹಾಜರಿದ್ದರು.