ನಾಳೆಯಿಂದ ಮಾದರಿ ಯುವ ಸಂಸತ್ ಅತಿ ದೊಡ್ಡ ಅಧಿವೇಶನ
ಶಿವಮೊಗ್ಗ: ಫೆ.8 ಮತ್ತು 9ರಂದು ನಗರದ ಒಳಾಂಗಣ ಕ್ರೀಡಾಂಗಣ ಸಂಸತ್ ಆಗಿ ರೂಪಾಂತರವಾಗುತ್ತಿದೆ. ನಗರದ 48 ವಿವಿಧ ಶಾಲೆಯ ಒಟ್ಟಾರೆ 545 ವಿದ್ಯಾರ್ಥಿಗಳು ಪಾಲ್ಗೊಳ್ಳುವ ಅತಿದೊಡ್ಡ ಮಾದರಿ ಯುವ ಸಂಸತ್ ಅಧಿವೇಶನ ಅಲ್ಲಿ ನಡೆಯುತ್ತಿದೆ.
ದೆಹಲಿಯ ಸಂಸತ್ ಅಧಿವೇಶನದಲ್ಲಿ ನಡೆಯುವ ಪಾರಂಪರಿಕ ಪದ್ಧತಿ ಹೋಲುವಂತೆ ಇಲ್ಲೂ ಚಟುವಟಿಕೆ ನಡೆಯಲಿದೆ. ಪ್ರಧಾನ ಮಂತ್ರಿಗಳಿಗೆ ರಾಷ್ಟ್ರಪತಿಗಳಿಂದ ಪ್ರಮಾಣ ವಚನ, ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳಿಂದ ಭಾಷಣ, ಗಣ್ಯರಿಗೆ ಸಂತಾಪ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆ, ಚರ್ಚೆ, ಸರ್ಕಾರಿ ಮಸೂದೆ ಮಂಡನೆ ಮತ್ತು ಚರ್ಚೆ, ಪ್ರಶ್ನೋತ್ತರ, ಹೊಸ ಸದಸ್ಯರಿಂದ ಪ್ರಮಾಣ ವಚನ, ಖಾಸಗಿ ಮಸೂದೆ ಮಂಡನೆ, ಶೂನ್ಯವೇಳೆ ಪ್ರಶ್ನೋತ್ತರ ಹೀಗೆ ಸಂಸತ್ನಲ್ಲಿ ನಡೆಯುವ ಚಟುವಟಿಕೆಯನ್ನು ಇಲ್ಲಿ ಮಕ್ಕಳು ಪ್ರಸ್ತುಪಡಿಸುವರು.
ದೆಹಲಿ ಮಾದರಿ ಸದನ; ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮಾದರಿ ಯುವ ಸಂಸತ್ ಅಧಿವೇಶನ ತರಬೇತುದಾರ ಪ್ರೊ. ಎಸ್.ವಿ. ಶಾಸ್ತ್ರಿ, ದೆಹಲಿಯಲ್ಲಿ ನಡೆಯುವ ಅಧಿವೇಶ ಮಾದರಿಯಲ್ಲಿಯೇ ಇಲ್ಲಿಯೂ ಸದನ ನಡೆಯಲಿದೆ. ಇದಕ್ಕಾಗಿ ಪೂರ್ವತಯಾರಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಫೆ. 8 ರಂದು ಬೆಳಗ್ಗೆ 10 ಗಂಟೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶಾಸಕ ಪ್ರಸನ್ನಕುಮಾರ್, ವಿಪ ಸದಸ್ಯ ಸಿದ್ದರಾಮಣ್ಣ ಪಾಲ್ಗೊಳ್ಳುವರು. 9ರಂದು ಸಂಜೆ 6 ಗಂಟೆಗೆ ವಿಪ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಸಚಿವ ಕಿಮ್ಮನೆ ರತ್ನಾಕರ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಉಪಸಭಾಪತಿ, ಹಂಗಾಮಿ ಸಭಾಪತಿ, ಸಂಸದೀಯ ಕಾರ್ಯದರ್ಶಿ, ಪ್ರಧಾನ ಮಂತ್ರಿ, ಉಪ ಪ್ರಧಾನಿ, ಗೃಹಮಂತ್ರಿ, ರಕ್ಷಣಾ ಮಂತ್ರಿ ಹಣಕಾಸು ಮಂತ್ರಿ, ವಿರೋಧ ಪಕ್ಷದ ನಾಯಕರು ಹೀಗೆ, ಹಾಲಿ ನಮ್ಮ ವ್ಯವಸ್ಥೆಯಲ್ಲಿರುವ ಹುದ್ದೆಗಳನ್ನು ಮಕ್ಕಳು ನಿರ್ವಹಿಸುತ್ತಿದ್ದಾರೆ. ಒಟ್ಟಾರೆ 58 ಮಂತ್ರಿಗಳು, 48 ವಿರೋಧ ಪಕ್ಷದ ನಾಯಕರು ಸದನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.