ಸಾಂಸ್ಕೃತಿಕ ವಿಧ್ವಂಸಕ ದಿನ ಆಚರಣೆ ನಿಷೇಧಿಸಿ
ಶಿವಮೊಗ್ಗ: ವ್ಯಾಲೆಂಟೈನ್ ಡೇಯಂತಹ ಅನಿಷ್ಟ ರೂಢಿಗಳಿಗೆ ಪ್ರೋತ್ಸಾಹ ನೀಡದೆ ಮತ್ತು ಸಂಸ್ಕೃತಿ ವಿಧ್ವಂಸಕ ದಿನಗಳ ಆಚರಣೆ ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಶುಕ್ರವಾರ ಡಿಸಿ ಕಚೇರಿ ಮುಂಭಾಗ ಸಾಂಕೇತಿಕ ಧರಣಿ ನಡೆಸಿದ ಸಮಿತಿ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಫೆ.14ರಂದು ವ್ಯಾಲೆಂಟೈನ್ ಡೇ ಆಚರಿಸುವ ವಿಕೃತ ರೂಢಿಯು ಭಾರತದ ಮಹಾವಿದ್ಯಾಲಯ, ಶಾಲೆ, ಪ್ರವಾಸಿ ಸ್ಥಳಗಳಲ್ಲಿ ನಡೆಯುತ್ತಿದೆ ಎಂದರು.
ಮಲೇಶಿಯಾ ಸೇರಿದಂತೆ ವಿವಿದ ದೇಶಗಳು ವ್ಯಾಲೆಂಟೈನ್ ಡೇ ಆಚರಣೆ ನಿಲ್ಲಿಸಿವೆ. ರೋಮನ್ ಕ್ಯಾಥೋಲಿಕ್ ಚರ್ಚ್ ಸಹ ಫಾದ್ರಿ ವ್ಯಾಲೆಂಟೈನ್ ಎಂಬ ಹೆಸರಿನ ಯಾವುದೇ ವ್ಯಕ್ತಿ ವಿಷಯದಲ್ಲಿ ಸೂಕ್ತ ಪುರಾವೆ ಇಲ್ಲವೆಂದು, ತಮ್ಮ ದಿನದರ್ಶಿಕೆಯಿಂದ ಈ ಡೇ ತೆಗೆದು ಹಾಕಿದೆ ಎಂದರು.
ಛತ್ತೀಸ್ಗಡ ಸರ್ಕಾರವು ವ್ಯಾಲೆಂಟೈನ್ ಡೇ ಮೇಲೆ ನಿರ್ಬಂಧ ಹೇರಿ ಮಾತೃ- ಪಿತೃರ ಪೂಜಾ ದಿನ ಪ್ರಾರಂಭಿಸಿದೆ. ಅದರಂತೆ ಇಲ್ಲಿನ ಸರ್ಕಾರ ಕೂಡ ಗಮನಹರಿಸಿ ನಮ್ಮ ಸಂಸ್ಕೃತಿಯ ಮೇಲೆ ಆಘಾತ ಮಾಡುವ ದಿನಗಳನ್ನು ಆಚರಿಸದಂತೆ ನಿಷೇಧ ಹೇರಬೇಕೆಂದು ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಸಮಿತಿ ಸದಸ್ಯರು ಆಗ್ರಹಿಸಿದರು.