'ಸುವರ್ಣ ಸಂಭ್ರಮ ಹೈಜಾಕ್ ಹುನ್ನಾರ'
ಕ.ಪ್ರ.ವಾರ್ತೆ, ಹೊಸನಗರ, ಫೆ.6
ಇತ್ತೀಚಿಗೆ ನಡೆದ ತಾಲೂಕಿನ ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮ ಯಶಸ್ವಿಯಾಗಿದ್ದು, ಇದಕ್ಕೆ ಸ್ಥಳೀಯರ ಹಗಲು ರಾತ್ರಿಯ ಶ್ರಮ ಮತ್ತು ಧನ ಸಹಾಯದಿಂದ ನಡೆದಿದೆ. ಆದರೆ ಬೆಂಗಳೂರಿನ ಕಲಾತೀರ ತನ್ನದೇ ಸ್ವಂತ ಶ್ರಮದಿಂದ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿರುವುದನ್ನು ಸುವರ್ಣ ಮಹೋತ್ಸವ ಸಮಿತಿ ಖಂಡಿಸಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮತ್ತು ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಮಿತಿ ಕಾರ್ಯದರ್ಶಿ ಎ.ಒ. ರಾಮಚಂದ್ರ ಮತ್ತು ದೊಡ್ಮನೆ ಲಕ್ಷ್ಮೀನಾರಾಯಣ, ಬೆಂಗಳೂರು ಕಲಾತೀರ ತಂಡದ ವ್ಯವಸ್ಥಾಪಕ ಉದಯಕುಮಾರ ಶೆಟ್ಟಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರು ಹಾಕಿಕೊಂಡು ಶಿವಾರ್ಪಣ ಕಾರ್ಯಕ್ರಮವನ್ನು 2.30 ಗಂಟೆಗಳ ಕಾರ್ಯಕ್ರಮ ನೀಡಿದ್ದಾರೆ.
ಆರೋಪವೇನು?: ಇದಕ್ಕೆ ಸಂಬಂಧಿಸಿದಂತೆ ಸಮಿತಿ ವತಿಯಿಂದ ಗೌರವಧನವನ್ನು ನೀಡಲಾಗಿದೆ ಆದರೆ ಉದಯಕುಮಾರ್ ಶೆಟ್ಟಿ ನೀಡಿದ ಪತ್ರಿಕಾ ಪ್ರಕಟಣೆ ಮತ್ತು ಜಾಹೀರಾತುಗಳಲ್ಲಿ ತಮ್ಮದೇ ನೇತೃತ್ವದಲ್ಲಿ ಇಡೀ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಸಲಾಗಿದೆ ಎಂಬ ಅರ್ಥದಲ್ಲಿ ಬಿಂಬಿಸಿದ್ದಾರೆ ಎಂದು ಆರೋಪಿಸಿದರು.
ಸುವರ್ಣ ಸಂಭ್ರಮದಲ್ಲಿ 2 ದಿನಗಳ ಕಾಲ ವಿನೂತನ ವೈವಿಧ್ಯಮಯ ಕಾರ್ಯಕ್ರಮ ನೀಡಿದ್ದು, ಗ್ರಾಮಸ್ಥರ ಸಹಕಾರದಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದೇವೆ. ಆದರೆ ಕಲಾತೀರ ತಂಡದ ವತಿಯಿಂದ ನೀಡಲಾಗಿರುವ ಮಾಹಿತಿಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಮತ್ತು ಗ್ರಾಮಸ್ಥರ ಪರಿಶ್ರಮ ಬದಿಗೊತ್ತಿ ತನ್ನದೇ ಅನ್ನುವ ರೀತಿಯಲ್ಲಿ ಬಿಂಬಿಸಿಕೊಂಡಿರುವುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ ಮತ್ತು ಸುವರ್ಣ ಮಹೋತ್ಸವ ಸಮಿತಿ ಬಗ್ಗೆ ಸಂಶಯಪಡುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪಷ್ಟ ಮಾಹಿತಿ ಅಗತ್ಯ: ಕಲಾತೀರ ನಡೆಸಿದ ಕಾರ್ಯಕ್ರಮದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಣ ಪಡಯಲಾಗುತ್ತದೆ ಎಂಬ ಮಾಹಿತಿ ದೊರಕಿದ್ದು, ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾರ್ಯಕ್ರಮದ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬೇಕು. ಕಲಾತೀರ ತಂಡಕ್ಕೆ ಯಾವುದೇ ಹಣ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ ಮಾತ್ರವಲ್ಲ ಕುಂಬಳೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾತೀರ ನಡೆಸಿದ ಕಾರ್ಯಕ್ರಮದ ಬಗ್ಗೆ ಮತ್ತು ಈಗಾಗಲೇ ನೀಡಿದ ತಪ್ಪು ಮಾಹಿತಿ ಬಗ್ಗೆ ಸ್ಪಷ್ಟನೆ ನೀಡಬೇಕು ಇಲ್ಲವಾದಲ್ಲಿ ಇಲಾಖೆ ಮುಂದೆ ಊರಿನ ಗ್ರಾಮಸ್ತರು ಧರಣಿ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.