ಕಿಮ್ಮನೆ ಕಾರು ಚಾಲಕಗೆ ಸನ್ಮಾನ
ಸಾಗರ: ಇಲ್ಲಿನ ವಿಪ್ರ ನೌಕರರ ಸಂಘ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ವಾಹನ ಚಾಲಕ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರ ಶಿವಮೊಗ್ಗ ಜಿಲ್ಲಾ ವಿಶೇಷಾಧಿಕಾರಿ ಪ್ರಾಣೇಶ್ ರಾವ್ ಮಾತನಾಡಿ, ನೀರಿನಲ್ಲಿ ಬಿದ್ದವರನ್ನು ಮೇಲೆತ್ತುವುದು ಕಷ್ಟದ ಕೆಲಸ. ಅಪಾಯವನ್ನು ಮನಗಂಡು ನೀರಿಗೆ ಹಾರಿ ಏಳು ಜನರ ಪ್ರಾಣ ಉಳಿಸಿದ ಚಂದ್ರಶೇಖರ್ ಅವರ ಧೈರ್ಯ ಪ್ರಶಂಸನೀಯ. ಇಂತಹ ಸಾಹಸ ಪ್ರವೃತ್ತಿ ಇದ್ದವರು ಮಾತ್ರ ಸರ್ವೋತ್ತಮರಾಗಲು ಸಾಧ್ಯ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಒಳ್ಳೆಯ ಕೆಲಸ ಮಾಡಿದವರನ್ನು ಜನರು ಗುರುತಿಸುವುದು ವಿರಳ. ಚಂದ್ರಶೇಖರ್ ಅವರ ಸಾಧನೆ ಸಾಮಾನ್ಯವಾದುದಲ್ಲ. ಅವರು ಧೈರ್ಯ ಮಾಡಿ ನೀರಿಗೆ ಧುಮುಕದೆ ಇದ್ದಿದ್ದರೆ ಒಂದು ಕುಟುಂಬವೇ ನೀರು ಪಾಲಾಗುವ ಸಾಧ್ಯತೆ ಇತ್ತು ಎಂದು ಹೇಳಿದರು.
ಖುಷಿ ತಂದಿದೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ್, ನನ್ನ ಸಾಹಸಪ್ರವೃತ್ತಿಗೆ ಶಿಕ್ಷಕರಾದ ವನಶ್ರೀ ಮಂಜಪ್ಪ ಹಾಗೂ ಬಿ.ಎನ್. ಪ್ರಸನ್ನ ಅವರ ಪ್ರೇರಣೆ ಕಾರಣವಾಗಿದೆ. ಹಾಲಿ ವಿಧಾನಸಭಾಧ್ಯಕ್ಷರಾಗಿರುವ ಕಾಗೋಡು ತಿಮ್ಮಪ್ಪ ಅವರ ಬಳಿ ಚಾಲಕನಾಗಿದ್ದಾಗ ಧೈರ್ಯ, ಸಿ.ಎಂ. ಉದಾಸಿ ಅವರ ಬಳಿ ಚಾಲಕನಾಗಿದ್ದಾಗ ತಾಳ್ಮೆ ಹಾಗೂ ಕಿಮ್ಮನೆ ರತ್ನಾಕರ್ ಅವರ ಬಳಿ ಹಾಲಿ ಕಾರ್ಯನಿರ್ವಹಿಸುತ್ತಿರುವಾಗ ಒಳ್ಳೆತನ ಕಲಿಯುವಂತೆ ಆಯಿತು ಎಂದು ಹೇಳಿದರು.
ಸಂಘದ ಅಧ್ಯಕ್ಷ ಶ್ರೀಧರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಅಶ್ವಿನಿಕುಮಾರ್, ಮುರಳಿಧರ ಹತ್ವಾರ್, ಜಿ.ಎಸ್. ಅನಂತ್ ಇನ್ನಿತರರು ಹಾಜರಿದ್ದರು. ಶ್ರೀಧರ ಹೆಗಡೆ ಸ್ವಾಗತಿಸಿದರು. ಶಂಕರ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೆಂಕಟೇಶ್ ಜೋಯಿಸ್ ವಂದಿಸಿದರು. ವೈ. ಮೋಹನ್ ನಿರೂಪಿಸಿದರು.