ಪ್ರಚಾರಕ್ಕೆ ಬಿಎಸ್‌ವೈ ರೆಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.7
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆ ಭರದಿಂದ ಸಾಗಿದ್ದು, ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಆಯೋಜನೆಗೊಂಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಜಿಲ್ಲಾ ವಕ್ತಾರ ಎಂ.ಶಂಕರ್, ಕಳೆದ ಒಂದೂವರೆ ತಿಂಗಳಿಂದ ಸಂಘಟನಾ ಕಾರ್ಯ ನಡೆದಿದೆ. ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ 10 ಜನ ಕಾರ್ಯಕರ್ತರ ತಂಡದ ರಚನೆ ಮೂಲಕ ಮನೆಮನೆ ಸಂಪರ್ಕ, ನವ ಮತದಾರನ ಭೇಟಿ, ಸಂಘಟನಾತ್ಮಕ ನಿಧಿ ಸಂಗ್ರಹ ಜೊತೆಗ ಸರ್ದಾರ್ ಪಟೇಲರ ಪ್ರತಿಮೆ ರಚನೆ ಹಿನ್ನೆಲೆಯಲ್ಲಿ ಲೋಹ ಸಂಗ್ರಹ ಅಭಿಯಾನ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.
ಮನೆ ಮನೆಗೆ ಮಾಹಿತಿ: ಮನೆಮನೆ ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಎನ್‌ಡಿಎ ಸರ್ಕಾರದ ಸಾಧನೆ ಕಿರುಹೊತ್ತಿಗೆ, ನರೇಂದ್ರ ಮೋದಿಯವರ ಸಾಧನೆಯ ಮಾಹಿತಿಯನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ಇದರ ಜೊತೆಗೆ ನವ ಮತದಾರರನ್ನು ಭೇಟಿ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕೆಲಸ ಮಾಡಲಾಗಿದೆ ಎಂದರು.
ಯಡಿಯೂರಪ್ಪನವರ ಜಿಲ್ಲಾ ಪ್ರವಾಸ ನಿಶ್ಚಯವಾಗಿದ್ದು, ಶಿವಮೊಗ್ಗ, ಗ್ರಾಮಾಂತರ, ತೀರ್ಥಹಳ್ಳಿ ಸಾಗರ, ಭದ್ರಾವತಿ, ಹೊಸನಗರ, ಬೈಂದೂರು, ಶಿರಾಳಕೊಪ್ಪ, ಸೊರಬ ಕ್ಷೇತ್ರದಲ್ಲಿ ಸಮಾವೇಶಗಳೂ ಸಹ ನಡೆಯಲಿವೆ ಎಂದು ಹೇಳಿದರು.
ಕಾರ್ಯಕರ್ತರ ಸಮಾವೇಶಗಳು ಸಾರ್ವಜನಿಕ ಸಮಾರಂಭಗಳಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿ.ಎಸ್. ಯಡಿಯೂರಪ್ಪನವರೊಂದಿಗೆ ಮಾಜಿ ಡಿಸಿಎಂ ಈಶ್ವರಪ್ಪ, ಸಂಸದ ಆಯನೂರು ಮಂಜುನಾಥ್, ಬಿ.ವೈ. ರಾಘವೇಂದ್ರ, ಮುಖಂಡ ಜ್ಯೋತಿ ಪ್ರಕಾಶ್, ರುದ್ರೇಗೌಡರು ಸೇರಿದಂತೆ ವಿವಿಧ ನಾಯಕರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ವಿಶೇಷ ಕಾರ್ಯಕ್ರಮ: ಫೆ.11ರಂದು ಮಂಗಳವಾರ ಸಂಜೆ 5.30ಕ್ಕೆ ಶಿವಮೊಗ್ಗ ಲಗಾನ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ಪ್ರಮುಖ ನಾಗರಿಕರೊಂದಿಗೆ ಸಮಾಲೋಚನೆ ಸಭೆ ಹಮ್ಮಿಕೊಳ್ಳಲಾಗಿದೆ. ವೈದ್ಯರು, ಎಂಜಿನಿಯರ್, ಚಾರ್ಟೆಡ್ ಅಕೌಂಟೆಂಟ್, ಉದ್ಯಮಿ, ಪ್ರೊಫೆಸರ್ ಸೇರಿದಂತೆ ವಿವಿಧ ಕ್ಷೇತ್ರದ ಪರಿಣಿತರನ್ನು ಆಹ್ವಾನಿಸಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಆದ್ಯತೆ ಏನಿರಬೇಕೆಂಬುದರ ಬಗ್ಗೆ ಯಡಿಯೂರಪ್ಪ ಸಮಾಲೋಚನೆ ಮಾಡುವರು.
ರಾಷ್ಟ್ರೀಯ ನಾಯಕರ ಪ್ರವಾಸ: ಮುಂಬರುವ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಾದ ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಪ್ರವಾಸ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ಮತದಾರರ ಸಮಾವೇಶಗಳು ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದ ಅವರು, ನರೇಂದ್ರ ಮೋದಿಯವರ ಅಭಿಮಾನಿಗಳು, ಬೆಂಬಲಿಗರು ಈಗಾಗಲೇ ವಿವಿಧ ಚಟುವಟಿಕೆ ನಡೆಸುತ್ತಿದ್ದು, ನರೇಂದ್ರ ಮೋದಿಯವರ ಪರ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಪುರುಷೋತ್ತಮ್, ಬಿಳಕಿ ಕೃಷ್ಣಮೂರ್ತಿ, ಜಿಲ್ಲಾ ಸಹ ಖಜಾಂಚಿ, ಸಾಗರ ಪ್ರಭಾರಿ ಚಂದ್ರಶೇಖರ್, ಪಕ್ಷದ ಜಿಲ್ಲಾ ಮಾಧ್ಯಮ ಪ್ರಮುಖ ಮಧುಸೂಧನ್ ಇದ್ದರು.