ಕೈಮುಗಿದು ಕೇಳುತ್ತೇನೆ ನ್ಯಾಯ ಕೊಡಿಸಿ: ಕಾಗೋಡು
ಶಿವಮೊಗ್ಗ: ಏನಾದ್ರೂ ಮಾಡಿ ಪಾರಂಪರಿಕ ಅರಣ್ಯ ವಾಸಿಗಳಿಗೆ ನ್ಯಾಯ ಕೊಡಿಸಿ. ನೊಂದ ಮನಸ್ಸಿಗೆ ಸಾಂತ್ವನ ನೀಡಿ. ನಾನು ಕೈಮುಗಿದು ನಿಮ್ಮಲ್ಲಿ ಕೇಳುತ್ತೇನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ವಿನಮ್ರವಾಗಿ ಕೋರಿದ ಪ್ರಸಂಗ ನಡೆಯಿತು.
ಇಲ್ಲಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶನಿವಾರ ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸದಸ್ಯರನ್ನು ಬದಲಿಸಿ: ಗ್ರಾಮ ಅರಣ್ಯ ಸಮಿತಿಯಲ್ಲಿರುವ ಕೆಲವರಿಗೆ ಅಕ್ಷರ ಜ್ಞಾನವೇ ಇಲ್ಲ, ಇಂತವರನ್ನು ಬದಲಿಸಿ ಎಂದು ಸಲಹೆ ನೀಡಿದ ಅವರು, ಮೊದಲು ಅಧಿಕಾರಿಗಳು ಕಾಯ್ದೆ ಬಗ್ಗೆ ಸಮಗ್ರವಾಗಿ ಆರಿಯಬೇಕು. ನೀವು ಜನರಿಗೆ ಏನು ತರಬೇತಿ ನೀಡುತ್ತೀರಿ ಎಂಬುದನ್ನು ನಾನೇ ಖುದ್ದು ಬಂದು ನೋಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ಗಾರ್ಡ್ಗಳು ಅರಣ್ಯ ರಕ್ಷಿಸುತ್ತಿಲ್ಲ. ಅರಣ್ಯ ಉಳಿದಿರುವುದೇ ಅಲ್ಲಿರುವ ಜನರಿಂದ. ಇಂದಿಗೂ ಕಾಡು ಹಾಗೂ ಕಾಡಿನ ಅಂಚಿನಲ್ಲಿರುವ ಜನ ತಮ್ಮ ಮನೆಗೆ ಸರಿಯಾದ ತೊಲೆಯನ್ನೂ ಹಾಕಿಲ್ಲ. ಗೊತ್ತಾಯ್ತೇನ್ರೀ ಅರಣ್ಯ ಅಧಿಕಾರಿಗಳೇ ಎಂದು ಸಭೆಯಲ್ಲಿದ್ದವರನ್ನು ತಿವಿದರು.
ಡಿಸಿ ವಿಪುಲ್ ಬನ್ಸಲ್, ಅಪರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.