ದಾಖಲೆ ಅಂತರದಲ್ಲಿ ಬಿಎಸ್ವೈ ಜಯ: ಆಯನೂರು
ಶಿವಮೊಗ್ಗ: ನರೇಂದ್ರ ಮೋದಿ ಬಿರುಗಾಳಿ, ಯಡಿಯೂರಪ್ಪನವರು ಪ್ರವಾಹವಿದ್ದಂತೆ. ಇವರಿಬ್ಬರ ನೇತೃತ್ವದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎದುರಾಳಿಗಳು ಕೊಚ್ಚಿ ಹೋಗುತ್ತಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಬಣ್ಣಿಸಿದ್ದಾರೆ.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗ್ರಾಮಾಂತರ ಬಿಜೆಪಿವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಾಮರ್ಥ್ಯ ಓರೆಗೆ ಹಚ್ಚುವ ಸಂದರ್ಭ ಬಂದಿದೆ. ಬಿಎಸ್ವೈ ಖಚಿತವಾಗಿ ಗೆಲ್ಲುತ್ತಾರೆ. ಆದರೆ, ದಾಖಲೆ ಅಂತರದಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು. ಇತಿಹಾಸದಲ್ಲಿ ಆಗಿರದ ದಾಖಲೆ ನಿರ್ಮಾಣ ಮಾಡಬೇಕು, ಮೈಮರೆಯಬಾರದು ಎಂದರು.
ಸಂಪುಟ ದರ್ಜೆ ಸಚಿವ: ಮೋದಿ ಪ್ರಧಾನಿಯಾಗುತ್ತಾರೆ, ಯಡಿಯೂರಪ್ಪ ಪ್ರಬಲ ಸಂಪುಟ ಸಚಿವರಾಗುತ್ತಾರೆ. ನಂತರ ನಿಂತುಹೋಗಿರುವ ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳಿಸುವ ಜೊತೆಗೆ ಕೇಂದ್ರದಿಂದ ಮತ್ತಷ್ಟು ಯೋಜನೆಗಳನ್ನು ತಂದು ಜಿಲ್ಲೆಯ ಚಿತ್ರಣವನ್ನೇ ಬದಲು ಮಾಡುತ್ತಾರೆ ಎಂದರು.
ರಾಜ್ಯ ಸರ್ಕಾರ ವಿಫಲ: ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, 7-8 ಬಾರಿ ಬಜೆಟ್ ಮಂಡಿಸಿ, ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ವಿಫಲರಾಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಭಿವೃದ್ಧಿ ಶೂನ್ಯ ಹಾಗೂ ಇಡೀ ರಾಷ್ಟ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ನರೇಂದ್ರ ಮೋದಿ, ಈ ವಾತಾವರಣದಲ್ಲಿ ಚುನಾವಣೆಯಲ್ಲಿ ನಡೆಯುತ್ತಿದೆ ಎಂದರು.