ಮುಂದೆ ಒಟ್ಟಾಗಿ ಹೆಜ್ಜೆ ಹಾಕೋಣ: ಈಶ್ವರಪ್ಪ
ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಗೊಂದಲವನ್ನು ನಾವೇ ಮಾಡಿಕೊಂಡೆವು, ಕಾಂಗ್ರೆಸ್, ಜೆಡಿಎಸ್ ಮಾಡಿದ್ದಲ್ಲ. ನಾವೇ ಒಬ್ಬರಿಗೊಬ್ಬರು ಕೆಸರು ಎರಚಾಟ ಮಾಡಿ ಅದರ ಫಲ ಇಬ್ಬರೂ ಕೂಡ ಅನುಭವಿಸಿದೆವು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಕಾರ್ಯಕರ್ತರ ಮುಂದೆ ಪಶ್ಚಾತ್ತಾಪ ಪಟ್ಟಿದ್ದಾರೆ.
ಹಾಗೆಯೇ ಮುಂದೆ ಒಟ್ಟಾಗಿ ಹೆಜ್ಜೆ ಹಾಕಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಕೆಲಸಮಾಡೋಣ ಎಂದು ಕರೆ ನೀಡಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಆದ ತಪ್ಪಿನಿಂದ ಯಾರಿಗೆ ಜಾಸ್ತಿ ಯಾರಿಗೆ ಕಡಿಮೆ ನಷ್ಟವಾಗಿದೆ ಎಂಬ ಚರ್ಚೆ ಈಗ ಬೇಡ. ನಮ್ಮ ತಪ್ಪಿನಿಂದಾಗಿ ಲಾಟರಿ ರೂಪದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇಂದಿರಾಗಾಂಧಿಯವರ ಮನೆಯಲ್ಲಿ ಹುಟ್ಟಿದರೆ ಡೈರೆಕ್ಟ್ ಪ್ರಧಾನಿಗಳೇ ಹುಟ್ಟುತ್ತಾರೆ. ಚಿದಂಬರ್, ಪ್ರಣಬ್ರಂತ ಹಿರಿಯರು ಈ ಕೂಸಿನ ಕಂದಮ್ಮಗಳ ಎದುರು ಪ್ರಧಾನಿ ಅಭ್ಯರ್ಥಿಗಳಲ್ಲ. ರಾಹುಲ್ ಗಾಂಧಿ ದೇಶಕ್ಕಾಗಿ ಏನು ಮಾಡಿದ್ದಾರೆ. ಕನಿಷ್ಟ ಸದನದಲ್ಲೂ ಗಂಭೀರ ಚರ್ಚೆ ಮಾಡಿ ಗಮನ ಸೆಳೆದಿದ್ದಿಲ್ಲ. ಸೋನಿಯಾ ಮಗ ಅಷ್ಟೇ ಎಂದು ಟೀಕಿಸಿದರು.