ರಸ್ತೆ ಅಗಲೀಕರಣ ವಿಳಂಬಕ್ಕೆ ಹಿಂದಿನ ಸರ್ಕಾರ ಕಾರಣ: ಶಾಸಕ ಮಧು
ಸೊರಬ: ಪಟ್ಟಣದ ಮುಖ್ಯರಸ್ತೆ ಅಗಲೀಕರಣ ವಿಳಂಬಕ್ಕೆ ನಾವು ಕಾರಣರಲ್ಲ. ಹಿಂದಿನ ಶಾಸಕರ ನಿರ್ಲಕ್ಷ್ಯದಿಂದ ಅಗಲೀಕರಣ ನೆನೆಗುದಿಗೆ ಬಿದ್ದಿದ್ದು, ಸಾರ್ವಜನಿಕರೊಂದಿಗೆ ಅಗತ್ಯ ಸಂಪರ್ಕ ಹೊಂದಿರುವುದೇ ಇದಕ್ಕೆ ಕಾರಣ ಎಂದು ಶಾಸಕ ಎಸ್. ಮಧು ಬಂಗಾರಪ್ಪ ರಸ್ತೆ ವಿಳಂಬದ ಕುರಿತು ಸ್ಪಷ್ಟಪಡಿಸಿದರು.
ಪಟ್ಟಣದ ದುರ್ಗಾಂಬಾ ದೇವಸ್ಥಾನ ಆವರಣದಲ್ಲಿ ಮಾರಿಕಾಂಬ ಮತ್ತು ದುರ್ಗಾಂಬಾ ಜಾತ್ರಾ ಸಮಿತಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರು. 1.75 ಕೋಟಿ: ಪ್ರಸ್ತುತ 1.75 ಕೋಟಿ ಮಂಜೂರಾಗಿದ್ದು, ಫೆ 16-17 ರಂದು ಅಗಲೀಕರಣಕ್ಕೆ ಚಾಲನೆ ನೀಡಲಾಗುವುದು. ಮುಖ್ಯರಸ್ತೆ ನಿವಾಸಿಗಳಲ್ಲಿ ಶೇ.90 ಜನತೆ ಒಪ್ಪಿಗೆ ನೀಡಿದ್ದು, ಶೆ.10 ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದಿಕೊಂಡು ಹೆಚ್ಚಿನ ಪರಿಹಾರ ನೀಡುವ ಮೂಲಕ ಎಲ್ಲರ ಒಪ್ಪಿಗೆ ಮೇರೆಗೆ ತೆರವು ಪ್ರಕ್ರಿಯೆ ಆರಂಭಿಸಲಾಗುವುದು. ತಾಲೂಕಿನ ಮುಖ್ಯರಸ್ತೆ ಅಗಲೀಕರಣ, ದುರಸ್ತಿಗಾಗಿ ಹಣ ಮಂಜೂರಾಗಿದ್ದು, ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿಸಿದರು.
ಶಿವಮೊಗ್ಗ-ಆನವಟ್ಟಿ ರಸ್ತೆ ತುಂಬಾ ಹಾಳಾಗಿದ್ದು, ಸಾರ್ವಜನಿಕರು ದುರಸ್ತಿಗಾಗಿ ಒತ್ತಾಯಿಸಿದ್ದಾರೆ. ಈಗಾಗಲೇ ದುರಸ್ತಿ ಆರಂಭಗೊಂಡಿದ್ದು, ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸೊರಬ -ಶಿರಾಳಕೊಪ್ಪ ರಸ್ತೆ ದುರಸ್ತಿಗೆ ಟೆಂಡರ್ ಕರೆದಿದ್ದು, ಮಳೆ ಬೀಳುವ ಮುನ್ನವೇ ಎಲ್ಲಾ ಮುಖ್ಯರಸ್ತೆ ಅಗಲೀಕರಣ ಹಾಗೂ ದುರಸ್ತಿ ಕಾರ್ಯ ಮುಗಿಸಲಾಗುವುದು ಎಂದರು.
ಅಧ್ಯಕ್ಷತೆಯನ್ನು ಜಾತ್ರಾ ಸಮಿತಿ ಉಪಾಧ್ಯಕ್ಷ ಪಾಣಿರಾಜಪ್ಪ ವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಸವಿತಾ ಭಟ್ ಮತ್ತು ಸಂಗಡಿಗರಿಂದ ಪೌರಾಣಿಕ ಲವ - ಕುಶ ಯಕ್ಷಗಾನ ನಡೆಯಿತು. ಡಾ.ಎಂ.ಕೆ. ಭಟ್, ವಸಂತಾಚಾರ್, ತುಕ್ಕಪ್ಪ ಸಣ್ಣಬೈಲ್, ಸಿಗ್ಗದ ಪರಶುರಾಮಪ್ಪ, ಸಣ್ಣಬೈಲ್ ಪರಶುರಾಮಪ್ಪ, ಮಂಚಿ ಹನುಮಂತಪ್ಪ, ಪ್ರಶಾಂತ ಮೇಸ್ತ್ರಿ, ನಾಡಿಗ್ ಕೃಷ್ಣಮೂರ್ತಿ, ಗಣಪತಿ, ಎಂ.ಡಿ. ಶೇಖರ್, ಶ್ರೀಪಾದ್ ಹೆಗಡೆ, ನಿಸರಾಣಿ ಮೊದಲಾದವರು ಹಾಜರಿದ್ದರು.