ಸುದ್ದಿ ಸಂಕ್ಷೇಪ
14ರಿಂದ ಬಂದೂಕು ತರಬೇತಿ ಶಿಬಿರ
ತೀರ್ಥಹಳ್ಳಿ: ಇಲ್ಲಿನ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ತೀರ್ಥಹಳ್ಳಿ ಉಪವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿನ 18 ವರ್ಷ ಮೇಲ್ಪಟ್ಟ ಅರ್ಹ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳಿಗೆ ಈ ಶಿಬಿರವನ್ನು ಏರ್ಪಡಿಸಲಾಗಿದ್ದು, ಫೆ.10 ರೊಳಗೆ ಅರ್ಜಿ ಸಲ್ಲಿಸಬಹುದು. ಫೆ.14 ರಿಂದ ಫೆ.23 ರವರೆಗೆ ತೀರ್ಥಹಳ್ಳಿಯ ಪೊಲೀಸ್ ಪೆರೇಡ್ ಮೈದಾನದಲ್ಲಿ ಶಿಬಿರ ನೆಡೆಯಲಿದೆ. ಶಿಬಿರಕ್ಕೆ ಸೇರಬಯಸುವವರು 18 ವರ್ಷಕ್ಕೆ ಮೇಲ್ಪಟ್ಟವರಿರಬೇಕು, ಯಾವುದೇ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿರಬಾರದು, ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯೊಳಗೆ ವಾಸವಿರಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಮಾಹಿತಿಗೆ ಡಿವೈಎಸ್ಪಿ ಕೆ. ಚನ್ನಪ್ಪ ಪೊ. 9480803340, ಅಂಬಳಿಕೆ ಗಿರೀಶ್-9448721881, ರಘುನಾಥ್ ಹೊಳೆಕೊಪ್ಪ- 9449 62650 ಇವರನ್ನು ಸಂಪರ್ಕಿಸಿ.
ಇಂದು ಬೇಂದ್ರೆ ಭಾವಾನುನರ್ತನ
ತೀರ್ಥಹಳ್ಳಿ: ವರಕವಿ ದಿ.ದ.ರಾ. ಬೇಂದ್ರೆ ಜನ್ಮ ಶತಮಾನೋತ್ಸವ ಅಂಗವಾಗಿ ಬೇಂದ್ರೆ ಭಾವಾನುನರ್ತನ ಕಾರ್ಯಕ್ರಮ ಫೆ.9ರಂದು ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ 6.30 ಗಂಟೆಗೆ ಏರ್ಪಡಿಸಲಾಗಿದೆ. ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು. ಬೇಂದ್ರೆ ಕವನ ಕುರಿತು ಡಾ. ಬಿದರಗೋಡು ನಾಗೇಶ್ ಉಪನ್ಯಾಸ ನೀಡುವರು. ಯು.ಸೀತಾರಾಮಾಚಾರ್ಯ, ಸಂದೇಶ ಜವಳಿ, ಟಿ.ಕೆ.ರಮೇಶ್ ಭಾಗವಹಿಸಲಿದ್ದು,ಕಸಾಪ ಅಧ್ಯಕ್ಷ ನೆಂಪೆ ದೇವರಾಜ್ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗದ ಡಾ. ಕೆ.ಎಸ್. ಪವಿತ್ರ, ಡಾ.ಕೆ.ಎಸ್. ಶುಭ್ರತಾ, ವಿಜಯ ಕಲಾನಿಕೇತನ ತಂಡದಿಂದ ದ.ರಾ. ಬೇಂದ್ರೆ ಕವನಗಳಿಗೆ ನೃತ್ಯ ರೂಪಕ ನಡೆಯಲಿದೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ತೀರ್ಥಹಳ್ಳಿ ತಾಲೂಕು ಕಸಾಪ, ನಟಮಿತ್ರರು ಮತ್ತು ವಿಜಯ ಕಲಾನಿಕೇತನ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಮೋ ಟೀ ಸ್ಟಾಲ್ ಉದ್ಘಾಟನೆ
ಸೊರಬ: ಪಟ್ಟಣದ ಬಸ್ ಸ್ಟ್ಯಾಂಡ್ ಆವರಣದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಮೋ ಟೀ ಸ್ಟಾಲ್ ತೆರೆಯಲಾಯಿತು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಭವಾನಿ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ರಾಷ್ಟ್ರೀಯ ಪರಿಷತ್ ಅಧ್ಯಕ್ಷ ಪಾಣಿರಾಜಪ್ಪ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅರುಣ ಕುಮಾರ್, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸದಸ್ಯೆ ಕೋಮಲಾ ನಿರಂಜನ್, ಚಿಕ್ಕಾವಲೀ ನಾಗರಾಜಗೌಡ ಇತರರಿದ್ದರು.