ಆಸ್ಪತ್ರೆಗೆ 'ಆಶ್ರಯ'ವಿಲ್ಲ!
ವಿಶೇಷ ವರದಿ
ಶಿಕಾರಿಪುರ: ಪುರಸಭೆಯ ಮಾತು ಕೇಳಿ ದೂರದ ಆಶ್ರಯ ಬಡಾವಣೆಗೆ ಸ್ಥಳಾಂತರಗೊಂಡ ನಾಗರಿಕರು ಆಸ್ಪತ್ರೆ, ಬಸ್ ಸೌಕರ್ಯಕ್ಕೆ ಪರಿತಸುವಂತಾಗಿದೆ. ಸ್ವಚ್ಛತೆಯ ಸದುದ್ದೇಶದಿಂದ ಪಟ್ಟಣದ ಚಾನೆಲ್ ಏರಿಯಾದಲ್ಲಿ ವಾಸವಾಗಿದ್ದ ನೂರಾರು ಬಡ ಕುಟುಂಬಗಳನ್ನು ಕೆಲ ಕಿಮೀ ದೂರದ ಆಶ್ರಯ ಬಡಾವಣೆಗೆ ಸ್ಥಳಾಂತರಗೊಳಿಸಿದ ಪುರಸಭೆ ಈಗ ಕಣ್ಣು ಮುಚ್ಚಿ ಕುಳಿತಿದೆ.
ಇಲ್ಲಿ ಸಾಮಾನ್ಯ ಜನತೆಗೆ ಅತ್ಯವಶ್ಯಕವಾದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿ ಆರೋಗ್ಯಾಧಿಕಾರಿಗಳ ನೇಮಕದ ಬಗ್ಗೆ ಗಮನಹರಿಸದಿರುವುದರಿಂದ ಸ್ಥಳೀಯರು ನೂರಾರು ರುಪಾಯಿ ವ್ಯಯಿಸಿ ಆಟೋದಲ್ಲಿ ದೂರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಶಾಸಕ ಯಡಿಯೂರಪ್ಪ ಸಿಎಂ ಅವಧಿಯಲ್ಲಿ ಪಟ್ಟಣವನ್ನು ಮಾದರಿಯಾಗಿಸುವ ಪರಿಕಲ್ಪನೆ ಮೇರೆಗೆ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಸಂಪೂರ್ಣ ಅಭಿವೃದ್ಧಿಪಡಿಸಿದ್ದು, ಈ ಸಂದರ್ಭದಲ್ಲಿ ಅಂಜನಾಪುರ ಜಲಾಶಯದಿಂದ ಕೆರೆಗೆ ನೀರು ಹರಿದುಬರುವ ಚಾನೆಲ್ ಏರಿಯಾದಲ್ಲಿ ಹಲವಾರು ವರ್ಷದಿಂದ ವಾಸವಾಗಿದ್ದ ನೂರಾರು ಬಡ ಕುಟುಂಬಗಳಿಗೆ ಆಶ್ರಯ ಬಡಾವಣೆಯಲ್ಲಿ ನಿವೇಶನ ನೀಡಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ. ಬಡಾವಣೆಗೆ ಅತ್ಯವಶ್ಯಕವಾದ ನೀರು, ದೀಪ, ಚರಂಡಿ, ಕಾಂಕ್ರಿಟ್ ರಸ್ತೆ, ಕನ್ನಡ ಹಾಗೂ ಉರ್ದು ಶಾಲೆ ಮತ್ತಿತರ ಎಲ್ಲಾ ಸೌಕರ್ಯ ಇದ್ದರೂ ಆಸ್ಪತ್ರೆ ಮಾತ್ರ ಇಲ್ಲ.
ಕಾಯಿಲೆ ಆದರೆ ನೂರಾರು ರು. ವ್ಯಯಿಸಿ ಆಟೋದಲ್ಲಿ 5 ಕಿಮೀ ಹೆಚ್ಚಿನ ದೂರವಿರುವ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕಾಗಿದೆ. 6 ವರ್ಷದೊಳಗಿನ 150 ಮಕ್ಕಳ ಸಹಿತ 1,700 ಜನಸಂಖ್ಯೆ ಹೊಂದಿ ಆಸ್ಪತ್ರೆಯ ಸೌಲಭ್ಯ ಪಡೆಯಲು ಅರ್ಹವಾದ ನೂತನ ಬಡಾವಣೆ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ನಿತ್ಯ ತೊಂದರೆ ಅನುಭವಿಸಬೇಕಾಗಿದೆ.
ಮಳಿಗೆ ಖಾಲಿ: ಸಂಪೂರ್ಣ ಸುಸಜ್ಜಿತ ಬಡಾವಣೆಯಾಗಿ ಹಲವು ಲಕ್ಷ ವೆಚ್ಚದ ಸಮುದಾಯ ಭವನವನ್ನು ಪುರಸಭೆ ನಿರ್ಮಿಸಿ ಇದರೊಂದಿಗೆ 4 ಮಳಿಗೆಗಳಿಗೆ ಅವಕಾಶ ಕಲ್ಪಿಸಿ ಎಲ್ಲಾ ಮಳಿಗೆಗಳಿಗೆ ಬೀಗ ಜಡಿದು ಬೇಜವಾಬ್ದಾರಿತನ ತೋರಿದೆ. ಖಾಲಿ ಮಳಿಗೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿ ಕನಿಷ್ಠ ನರ್ಸ್ ಸೇವೆ ದಿನಪೂರ್ತಿ ಒದಗಿಸಿದಲ್ಲಿ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಅನುಕೂಲವಾಗಲಿದೆ. ಈಗಾಗಲೇ ಹಲವು ಬಾರಿ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದ್ದು, ಪ್ರಯೋಜನ ಮಾತ್ರ ಶೂನ್ಯ ಎಂದು ಸ್ಥಳೀಯ ರವೀಂದ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ಸಾಮಾನ್ಯ ಜನತೆ ಹೆಚ್ಚಾಗಿರುವ ಸ್ಥಳದಲ್ಲಿ ಇಂದಿಗೂ ಸಿಟಿ ಬಸ್ ಸಂಚಾರವಿಲ್ಲದೆ ಪಟ್ಟಣಕ್ಕೆ ಆಗಮಿಸಲು ಕನಿಷ್ಠ 3 ಕಿಮೀ ನಡೆದುಬರಬೇಕು. ಇಲ್ಲವೇ ನೂರಾರು ರು. ವ್ಯಯಿಸಿ ಆಟೋದಲ್ಲಿ ಪ್ರಯಾಣಿಸಬೇಕಾದ ದುಸ್ಥಿತಿ ಇಲ್ಲಿನ ಜನತೆಯದ್ದು. ಸಮೀಪದಲ್ಲಿ ಗಾಮ ಗ್ರಾಮವಿದ್ದು, ನಿತ್ಯ ಹಲವು ಬಸ್‌ಗಳು ಬೇರೆ ಮಾರ್ಗದಲ್ಲಿ ಸಂಚರಿಸಿ ಇಲ್ಲಿನ ಪ್ರಯಾಣಿಕರನ್ನು ಕಡೆಗಣಿಸಿದ್ದಾರೆ. ಬಸ್ ಸಂಚಾರ ಈ ಮೂಲಕ ಸಾಗಿದಲ್ಲಿ ಬಡಾವಣೆಯ ಜನತೆಯ ಜತೆಗೆ ಬಸ್ ಮಾಲೀಕರಿಗೂ ಅನುಕೂಲವಾಗಲಿದ್ದು, ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.