ಧಾರ್ಮಿಕ ಭಾವನೆ ಉಳಿವಿಗೆ ಗೋಷ್ಠಿ ಸಹಕಾರಿ: ಡಾ. ಮಹಾಂತಶ್ರೀ
ಸೊರಬ: ಧಾರ್ಮಿಕ ಭಾವನೆಗಳು ಸದಾ ನೆನಪಿನಲ್ಲಿರಬೇಕೆಂಬ ಉದ್ದೇಶದಿಂದ ಪ್ರತಿಬಾರಿಯೂ ಶಿವಾನುಭವ ನಡೆಸಲಾಗುತ್ತಿದೆ. ಇನ್ನೊಬ್ಬರಲ್ಲಿ ಅಡಕವಾಗಿರುವ ಒಳ್ಳೆಯ ಅಂಶಗಳನ್ನು ಪಾಲಿಸಬೇಕು. ಒಳ್ಳೆಯ ತತ್ವಗಳನ್ನು ಸದಾ ಅವಲೋಕಿಸಬೇಕು ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತಶ್ರೀ ಹೇಳಿದರು.
ಪಟ್ಟಣದ ಮುರುಘಾಮಠ ಆವರಣದಲ್ಲಿ ಚೌಡೇಶ್ವರಿ ಮೂರ್ತಿ ಪ್ರತಿಷ್ಠಾಪನಾ ಹಾಗೂ ಶ್ರೀಮಠದ ನೂತನ ಕಟ್ಟಡ ಪ್ರವೇಶೋತ್ಸವ ವಾರ್ಷಿಕೋತ್ಸವ ನಿಮಿತ್ತ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಿ ನಂತರ ನಡೆದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಹಂನಿಂದ ವಿನಾಶ: ದುಂಡಸಿ ಕುಮಾರ ಮಹಾಸ್ವಾಮಿಗಳು ಮಾತನಾಡಿ, ಮನಸ್ಸಿನಲ್ಲಿ ಭಕ್ತಿಪ್ರೀತಿಯ ಬದಲಿಗೆ ಅಹಂಗೆ ಸ್ಥಾನ ಕಲ್ಪಿಸಿದಲ್ಲಿ ವಿನಾಶ ಕಟ್ಟಿಟ್ಟ ಬುತ್ತಿ. ವಚನಗಳು ಬರೀ ಅಕ್ಷರ ರೂಪಗಳಲ್ಲಿರುವ ಪದ್ಯಗಳಾಗಿರದೇ ಜೀವನದ ತಾತ್ಪರ್ಯಗಳಾಗಿವೆ ಎಂದರು.
ಸಾಲೂರು ಪಂ. ರೇಣುಕಾಚಾರ್ಯ ಮಾತನಾಡಿದರು. ದಾಸೋಹ ನಡೆಸಿದ ಬನವಾಸಿ- ಸೊರಬ ಸಣ್ಣಲಿಂಗಪ್ಪ ವಂಶಸ್ಥರನ್ನು ಶ್ರೀಮಠದಿಂದ ಗೌರವಿಸಲಾಯಿತು. ಚಂದ್ರಶೇಖರ್ ನಿಜಗುಣ, ಮಂಜುಳಾ, ಸಂಧ್ಯಾ ಯು.ಎಲ್, ವಿರೂಪಾಕ್ಷಪ್ಪ, ಲೋಲಾಕ್ಷಮ್ಮ ಮೊದಲಾದವರು ಪಾಲ್ಗೊಂಡಿದ್ದರು.