ಪುರಾತನ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ
ತ್ಯಾಗರ್ತಿ: ಸಾಗರ ತಾಲೂಕು ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡ್ಯಾಂ ಹೊಸೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶ್ರೀಕಲ್ಲೇಶ್ವರ ಸ್ವಾಮಿಯ ಪ್ರಾಚೀನ ದೇವಾಲಯವನ್ನು ಹಳೆಯ ಕಾಲದ ಶೈಲಿಯಲ್ಲಿಯೇ ಶಿಲೆಗಳನ್ನು ಬಳಸಿ ಕಟ್ಟಿ ಜೀರ್ಣೋದ್ಧಾರಗೊಳಿಸಲಾಗಿದೆ.
ಫೆ.12ರಿಂದ 14ರ ವರೆಗೆ ಮೂರು ದಿನಗಳ ಕಾಲ ವೈಭವದ ಪ್ರತಿಷ್ಠಾಪನೆ ಮತ್ತು ಅಷ್ಟ ಬಂಧಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಶ್ರೀ ಕಲ್ಲೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಕಳೆದ ಮೂರು ವರ್ಷಗಳ ಹಿಂದೆ ಗ್ರಾಮಸ್ಥರ ಮತ್ತು ಹಲವು ದಾನಿಗಳ ಸಹಾಯ ಪಡೆದು ಶಿಲೆಗಳಿಂದ ಅತಿ ಆಕರ್ಷಕ ರೀತಿಯಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ.
ಪುನರ್ ಪ್ರತಿಷ್ಠಾಪನಾ ಮಹೋತ್ಸವವವು ಸಾಗರದ ಆಗಮಿಕ ಅರ್ಚಕ ಬಾ.ನಾ. ಜಗದೀಶ ಭಟ್ ಅವರ ಪೌರೋಹಿತ್ಯದಲ್ಲಿ ನೆರವೇರಲಿದೆ. ಫೆ.12ರಂದು ಬೆಳಿಗ್ಗೆ ಮಹಾಸಂಕಲ್ಪ, ದೇವನಾಂದಿ ಪುಣ್ಯಾಹ, ಅಷ್ಟಮೂರ್ತಿ ಪೂಜೆ, ಸ್ಥಾನ ಬಿಂಬ ಪ್ರಸಾದ ಶುದ್ಧಿ ನಡೆಯಲಿದೆ. ಸಂಜೆ ರಾಕ್ಷೋಘ್ನ ವಾಸ್ತು ಹವನಂ, ಬಲಿಪ್ರಧಾನ, ಯಾಗಮಂಟಪ ಸಂಸ್ಕಾರ, ಅಗ್ನಿಸಂಸ್ಕಾರ ಹೋಮ, ಅಧಿವಾಸ ಹೋಮ, ಶಾಂತಿ ಹೋಮ, ದಿಶಾಹೋಮ, ಅಸ್ತ್ರ ಹೋಮ, ಗಾಯತ್ರಿ ಹೋಮ, ಶಿಷ್ಟ ಹೋಮ, ಬ್ರಹ್ಮಕಲಶ ಸ್ಥಾಪನೆ, ರತ್ನನ್ಯಾಸ ಹೋಮ ನಡೆಯಲಿದೆ.
ಫೆ.13ರಂದು ಬೆಳಿಗ್ಗೆ ಪ್ರತಿಷ್ಟಾಂಗ ಹೋಮ, ದೇವರ ಪ್ರತಿಷ್ಠಾಪನೆ, ಅಷ್ಟಬಂಧಾರ್ಪಣ,ಶ್ರೀಗಣಪತಿ, ಶ್ರೀದುರ್ಗಾ, ಶ್ರೀವೃಷಭಾದಿ ಪರಿವಾರ ಪ್ರತಿಷ್ಠಾಪನಂ, ಶಿಖರಕಲಶಾದಿ ಪ್ರತಿಷ್ಠಾಪನಂ, ತತ್ವಕಲಾ ಹೋಮ, ಬ್ರಹ್ಮಕಲಶಾಭಿಷೇಚನಂ, ಪ್ರಾಣ ಪ್ರತಿಷ್ಠಾಪನಂ, ನೇತ್ರೋನ್ಮಿಲನಂ, ಮಹಾ ನಿರೀಕ್ಷಣಂ,ಬಲಿಪ್ರಧಾನ ನಡೆಯಲಿದೆ. ಸಂಜೆ ಭೇರಿತಾಡನಂ, ದೇವತಾಹ್ವಾನಂ, ಬಲಿದೇವತಾ ಹವನಂ, ಮಹಾಬಲಿ, ರಂಗಪೂಜೆ ಇತ್ಯಾದಿ ನಡೆಯಲಿದೆ.
ಫೆ.14ರಂದು ಅವಭೃತ ತೀರ್ಥ ಹೋಮ, ಓಕುಳಿ, ಪೂರ್ಣಾಹುತಿ ಇತ್ಯಾದಿ ವಿಧಿಗಳು ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಪ್ರವಚನ ನಡೆಯಲಿದೆ.
ಸಾರ್ವಜನಿಕರು ಪಾಲ್ಗೊಳ್ಳುವಂತೆ ದೇವಾಲಯ ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.