ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಲ ನೀಡುವುದಾಗಿ ರೈತರಿಗೆ ಪಂಗನಾಮ

Mainashree
Updated On : 10 Feb 2014, 12:25 pm

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಫೆ.9
ಸರ್ಕಾರದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಫಲಾನುಭವಿಗಳಿಗೆ ಸಾಲ ಕೊಡಿಸುವುದಾಗಿ ಹೇಳಿ ನೂರಾರು ಜನರಿಗೆ ಲಕ್ಷಾಂತರ ರು. ಪಂಗನಾಮ ಹಾಕಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
2013ರಲ್ಲಿ ರಾಜ್ಯ ಸರ್ಕಾರ ರೈತರಿಗೆ ಪಶು ಸಂಗೋಪನಾ ಇಲಾಖೆ ಹೈನುಗಾರಿಕೆಗೆಂದು 1.20 ಲಕ್ಷ ಸಾಲ ಕೊಡುವುದಾಗಿ ಪ್ರಕಟಿಸಿತ್ತು. ನಂತರ ಅದು ಅನುಷ್ಠಾನಕ್ಕೆ ಬಾರದಿದ್ದರೂ ಮುಗ್ದ ರೈತರನ್ನು ನಂಬಿಸಿ ಹಾವೇರಿ ಜಿಲ್ಲೆಯಲ್ಲಿ ಎನ್‌ಜಿಒ ಸಂಸ್ಥೆ ನಡೆಸುತ್ತಿದ್ದೇವೆ ಎಂಬ ವಂಚಕರ ತಂಡ, ರೈತರಿಗೆ ಸಹಾಯ ಮಾಡುವ ಹೆಸರಲ್ಲಿ ಪ್ರತಿ ರೈತರಿಂದ 8000 ದಂತೆ ಹಣ ಪಡೆದು ತಲೆಮರೆಸಿಕೊಂಡಿದ್ದಾರೆ.
ಸಾವಿರಾರು ರು. ವಂಚನೆ:  ವಂಚಕರ ಜಾಲ ಹಾವೇರಿ ಜಿಲ್ಲೆಯ ಹಾನಗಲ್, ಅಕ್ಕಿಆಲೂರು, ಹಿರೇಕೆರೂರು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಹಲವಾರು ರೈತರಿಗೆ ವಂಚಿಸಿದೆ. ಹೆಚ್ಚಾಗಿ ಶಿಕಾರಿಪುರ ತಾಲೂಕಿನಲ್ಲಿ 200ಕ್ಕೂ ಹೆಚ್ಚು ರೈತರಿಂದ ತಲಾ 8000 ದಂತೆ ಹಣ ಲಪಟಾಯಿಸಿದ್ದಾಗಿ ತಿಳಿಸಿದ್ದಾರೆ. ಇತರ ಕಡೆಯಲ್ಲಿಯೂ ಇದೇ ರೀತಿ ಮೋಸ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ರೈತರನ್ನು ನಂಬಿಸಿದ್ದು, ಹೇಗೆ?:  ಸರ್ಕಾರ ರೈತರಿಗೆ ಸಹಾಯ ಮಾಡುವಂತೆ ನಮಗೆ ತಿಳಿಸಿದ್ದಾಗಿ ಹೇಳಿಕೊಂಡ ವಂಚಕರ ತಂಡ ಹಾವೇರಿ ಜಿಲ್ಲೆಯಲ್ಲಿ ನಬಾರ್ಡ್‌ಯೋಜನೆಯಲ್ಲಿ ಸಾಲ ಸೌಲಭ್ಯ ಕಲ್ಪಿಸಿದ್ದಾಗಿ ಕೆಲವು ಜೆರಾಕ್ಸ್ ದಾಖಲೆ ಪ್ರದರ್ಶಿಸಿ ರೈತರನ್ನು ಬಲೆಗೆ ಬೀಳಿಸಿದ್ದರು. ರೈತರಿಂದ ಹಣ ಸಂಗ್ರಹಿಸಿ ನಂತರ ಇತರ ತಾಲೂಕುಗಳಲ್ಲಿ ಮೊದಲು ಪ್ರಮುಖರ ಹೆಸರು ದುರುಪಯೋಗಪಡಿಸಿಕೊಂಡು ರೈತ ಪ್ರಮುಖರ ಮುಖಾಂತರ ವಂಚಕರ ತಂಡ ಫಲಾನುಭವಿಗಳಿಂದ ಹಣ ಪಡೆದಿದೆ. ಇದಕ್ಕಾಗಿ ಸಂಸದರ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ.
ರೈತರ ಕೈಗೆ ಸಿಕ್ಕಿಬಿದ್ದ ಜಾಲ:  ಶಿಕಾರಿಪುರ ತಾಲೂಕಿನಲ್ಲಿ ಜಿಪಂ ಆಯ್ಕೆ ಮಾಡಿದೆ ಎಂಬ ದೊಡ್ಡ ಪಟ್ಟಿ ಸಹಿತ ರೈತರಿಂದ ತಲಾ 8000 ದಂತೆ ಹಣ ಸಂಗ್ರಹಿಸಲಾಗಿದೆ. ಆ ಎಲ್ಲ ಹಣ ಲಪಟಾಯಿರುವ ಮೋಸಗಾರರು ತಾಳಗುಂದ ರೈತ ನಾಯಕ ಚಂದ್ರಶೇಖರಪ್ಪ ಅವರು ತಮ್ಮ ಆಪ್ತರಿಂದ ತಲಾ 8000 ದಂತೆ ಹಣ ಪಡೆದು, ನೇರವಾಗಿ ಪ್ರಮುಖ ಆರೋಪಿ ಚಂದ್ರಪ್ಪನವರಿಗೆ ಕೊಡದೇ ತಮಗೆ ಪರಿಚಯದವರ ಸಹಾಯದಿಂದ ಎನ್‌ಜಿಒದಲ್ಲಿ ಭಾಗಿಯಾಗಿದ್ದರು ಎಂಬ ಮಹಿಳೆ ಹಿರೇಕೆರೂರಿನ ದೀವಿಗಿಹಳ್ಳಿಯ ಸರೋಜಮ್ಮ ಎಂಬವರಿಗೆ ಕೊಟ್ಟಿದ್ದಾರೆ. ಸರೋಜಮ್ಮ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿರುವ ಚಂದ್ರಪ್ಪ ಎಂಬವರಿಗೆ ಹಣ ಕೊಡುವಾಗ ಚಂದ್ರಪ್ಪನವರಿಂದ ಹಣ ಪಡೆದಿದ್ದಾಗಿ ಬರವಣಿಗೆಯಲ್ಲಿ ಅವರ ಸಹಿ ಪಡೆದ ಹಿನ್ನೆಲೆಯಲ್ಲಿ ವಂಚಕರ ಜಾಲ ಸಿಕ್ಕಿಹಾಕಿ ಕೊಂಡಿದೆ.
ಖಂಡನೆ:  ಶಿರಾಳಕೊಪ್ಪ ಭಾಗದ ಉಡಗಣಿ-ತಾಳಗುಂದ ರೈತಹೋರಾಟ ಸಮಿತಿ ಅಧ್ಯಕ್ಷ ರಾಜಣ್ಣ ಮುಗಳೀಕೊಪ್ಪ, ಕಾರ್ಯದರ್ಶಿ ಉಡಗಣಿ ಕೊಟ್ರೇಶ್, ಮಾಳಗೊಂಡನಕೊಪ್ಪ ವೀರಣ್ಣ, ಸೊರಬ ತಾಲೂಕು ರೈತಸಂಘದ ಉಪಾಧ್ಯಾಕ್ಷ ಗುತ್ಯಪ್ಪ, ಉಪಾಧ್ಯಕ್ಷ ಕೊಳಗಿ ಕರಿಬಸಪ್ಪ, ಖಜಾಂಚಿ ಸತೀಶ್ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ. ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement