'ಗುಣಾತ್ಮಕ ಶಿಕ್ಷಣ ಜಾರಿ ಬಗ್ಗೆ ಒಂದೂ ಮನವಿ ಬಂದಿಲ್ಲ'
ಶಿವಮೊಗ್ಗ: ಶಿಕ್ಷಕರ ಸಂಘದವರು ಇದುವರೆಗೆ ವೇತನ ತಾರತಮ್ಯ, ಭಡ್ತಿ ಇತ್ಯಾದಿ ವಿಷಯದ ಬಗ್ಗೆ ಮನವಿ ಸಲ್ಲಿಸಿದ್ದಾರೆಯೇ ಹೊರತು ಗುಣಾತ್ಮಕ ಶಿಕ್ಷಣ ಅನುಷ್ಠಾನ ಹೇಗೆ ಎಂದು ಒಂದೇ ಒಂದು ಮನವಿ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾರ್ಮಿಕವಾಗಿ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘವು ನಗರದಲ್ಲಿ ಸೋಮವಾರ ವ್ಯಕ್ತಿತ್ವ ವಿಕಸನ, ಗುಣಾತ್ಮಕ ಶಿಕ್ಷಣ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಬಗ್ಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
'ಅಪಾರ್ಥ ಮಾಡ್ಕೋಬೇಡಿ...' ಎನ್ನುತ್ತಲೇ ಚಾಟಿ ಬೀಸಿದ ಅವರು, ಗುಣತ್ಮಕ ಶಿಕ್ಷಣ ಹೇಗೆ ಮಾಡಬೇಕು ಎಂಬುದನ್ನು ಹೇಳಿ. ಇಷ್ಟು ದಿನ ನೀವು ಯಾಕೆ ಯೋಚನೆ ಮಾಡಿಲ್ಲ ಅಂಥ ನನಗೆ ಅರ್ಥ ಆಗ್ತಿಲ್ಲ ಎಂದರು.
ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಮನೆಗೆ ಕರದೆ ಸಲಹೆ ಕೊಡುತ್ತಾರೆ. ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಇರುವ ಶಿಕ್ಷಕರೇ ಏನೂ ಹೇಳುತ್ತಿಲ್ಲ. ಕ್ಷೇತ್ರದ ಹೊರಗಿನವರು ಹೇಳುವುದು ಸಾಧ್ಯವಾಗುವುದಾದರೆ ಒಳಗಿರುವವರಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಲೇಟಾಗಿದೆ: ಈ ರೀತಿಯ ಕಾರ್ಯಾಗಾರಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿ ಆಗಬೇಕಿತ್ತು. ಪರೀಕ್ಷೆ ಕೆಲವೇ ದಿನಗಳಿರುವಾಗ ಮಾಡಿದರೆ ಹೆಚ್ಚು ಉಪಯೋಗವಿಲ್ಲ ಎಂದು ಸಚಿವ ಕಿಮ್ಮನೆ ಹೇಳಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 29ನೇ ಸ್ಥಾನದಲ್ಲಿದೆ. ಇನ್ನೂ ಕೆಳಗಿರುವ ಜಿಲ್ಲೆಗಳೊಂದಿಗೆ ಹೋಲಿಸಿಕೊಳ್ಳಬೇಡಿ. ಆ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಜಿಲ್ಲೆಯಲ್ಲಿ ಸಾಕ್ಷರತೆ ಹೆಚ್ಚಿದ್ದರೂ ಫಲಿತಾಂಶ ಏಕೆ ಕಡಿಮೆಯಾಯಿತು ಎಂದು ವಿಮರ್ಶೆ ಮಾಡಿಕೊಳ್ಳಿ ಎಂದರು.
ಡಿಸೆಂಬರ್ ಅಂತ್ಯದೊಳಗೆ ಪಾಠ ಪ್ರವಚನ ಮುಗಿಯಬೇಕು. ಶಾಲಾ ವಾರ್ಷಿಕೋತ್ಸವಗಳನ್ನು ಡಿಸೆಂಬರ್ ಒಳಗೇ ಮುಗಿಸಬೇಕು. ನಾಟಕ, ನೃತ್ಯ ಅಂತ 8-9 ದಿನ ವ್ಯರ್ಥವಾದರೆ ವಿದ್ಯಾರ್ಥಿಗಳಿಗೇ ನಷ್ಟ. ಮರುದಿನ ಮಾಡಲಿರುವ ಪಾಠವನ್ನು ನೋಡಿಕೊಂಡು ಬರಲು ವಿದ್ಯಾರ್ಥಿಗಳಿಗೆ ಹೇಳಿ ಎಂದು ಸಲಹೆ ನೀಡಿದರು.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕ ಎ.ದೇವಪ್ರಕಾಶ್, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಸಿದ್ಧಬಸಪ್ಪ, ತಾಲೂಕು ಅಧ್ಯಕ್ಷ ವೈ.ಎಂ. ಧರ್ಮಪ್ಪ, ಡಿಡಿಪಿಐ ಬಿ.ಸಿ. ಬಸವರಾಜಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಹಾಲಾನಾಯ್ಕ್ ಸ್ವಾಗತಿಸಿದರು.