ಗ್ರಾಮೀಣರಿಂದಲೇ ಸಂಸ್ಕೃತಿ ಉಳಿವು
ಜೋಗ್‌ಫಾಲ್ಸ್: ಸುಗ್ಗಿಯ ಸಂಭ್ರಮದೊಂದಿಗೆ ಕುಸ್ತಿ ಪಂದ್ಯಾವಳಿ, ಕೆಸರುಗದ್ದೆ ಓಟ, ಮಲ್ಲಯುದ್ಧ, ಹಗ್ಗ-ಜಗ್ಗಾಟ ಮುಂತಾದ ಸ್ಪರ್ಧೆ ಏರ್ಪಡಿಸುವ ಮೂಲಕ, ಗ್ರಾಮೀಣ ಜನತೆ ತಮ್ಮ ಆರೋಗ್ಯ ಕಾಯ್ದುಕೊಳ್ಳುವುದರೊಂದಿಗೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಕುಮಾರಿ ಸುನಿತಾ ನಾಯಕ್ ತಿಳಿಸಿದರು.
ಹೆನ್ನಿ ಒಕ್ಕೂಟ ಮತ್ತು ಜ್ಞಾನ ವಿಕಾಸ ಕೇಂದ್ರದಿಂದ ಏರ್ಪಡಿಸಿದ್ದ ಕೆಸರುಗದ್ದೆ ಓಟಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಅವನತಿಯತ್ತ ಹಳ್ಳಿ: ಇಂದು ಹಳ್ಳಿ ಅವನತಿಯತ್ತ ಸಾಗುತ್ತಿದೆ. ಮಲೆನಾಡಿನ ಹಳ್ಳಿಗಳಲ್ಲಿ ವಯಸ್ಸಾದ, ತಂದೆ ತಾಯಿ ಮನೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಕರು ಪಟ್ಟಣದತ್ತ ಆಕರ್ಷಿತರಾಗುತ್ತಿದ್ದಾರೆ. ಹಳ್ಳಿಗಳಲ್ಲಿಯೂ ನಾವು ದುಡಿದು ಸ್ವಾವಲಂಬಿಗಳಾಗಿ ಬದುಕಬಹುದು ಎಂಬ ಕಲ್ಪನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಾಗಿದ್ದು, ಇದನ್ನು ಸಾಕಾರಗೊಳಿಸುವಲ್ಲಿ ಗ್ರಾಮೀಣ ಜನ ಕೈಜೋಡಿಸಬೇಕು ಎಂದರು.
ಹೆಬ್ಬೈಲು ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ವೀರರಾಜ ಜೈನ್, ಮಣ್ಣಿನಲ್ಲಿ ಅನೇಕ ರೋಗ ಗುಣಪಡಿಸುವ ಶಕ್ತಿ ಇದ್ದು, ಇಂದು ಪ್ರಕೃತಿ ಶಿಬಿರಗಳಲ್ಲಿ ಮಣ್ಣಿನ ಕಟ್ಟನ್ನು ಹಾಕುವ ಮೂಲಕ ಕಾಲು ನೋವು, ಮಂಡಿನೋವಿಗೆ ಚಿಕಿತ್ಸೆ ನೀಡಿದ್ದಾರೆ. ಭರತ ಭೂಮಿಯಲ್ಲಿ ಮಣ್ಣಿಗೂ ಮಹತ್ವವಿದ್ದು, ಕೆಸರುಗದ್ದೆ ಆಟದಿಂದ ದೇಹಕ್ಕೆ ವ್ಯಾಯಾಮ, ಮಣ್ಣಿನ ಅವಿನಾಭಾವ ಸಂಬಂಧ ಉಂಟಾಗುತ್ತದೆ ಎಂದರು.
ಕಾರ್ಗಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪುಷ್ಪ, ರಾಮರಾಜ್ಯದ ಕಲ್ಪನೆಯನ್ನು ಗಾಂಧೀಜಿ ಹಳ್ಳಿಗಳ ಉದ್ಧಾರದಿಂದ ಮಾತ್ರ ಸಾಧ್ಯ ಎಂದಿದ್ದರು. ಇದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗಾಂಧೀಜಿಯವರ ಕನಸನ್ನು ನನಸಾಗಿಸುತ್ತಿರುವುದು ಸಂತಸದ ಸಂಗತಿ ಎಂದರು.
ಹೆನ್ನಿ ಒಕ್ಕೂಟದ ಅಧ್ಯಕ್ಷ ಎಚ್.ಡಿ. ರಾಮಪ್ಪ, ತಮಗೆ ಬದುಕನ್ನು ಕಟ್ಟಿಕೊಟ್ಟ ಗ್ರಾಮಾಭಿವೃದ್ಧಿ ಯೋಜನೆಗೆ ತಾವು ಚಿರಋಣಿ ಎಂದರು.
ಜೋಗ್ ಒಕ್ಕೂಟದ ಅಧ್ಯಕ್ಷೆ ಪಾರ್ವತಿ ವಿಜಯನ್, ನಾವೆಲ್ಲರೂ ಒಂದೇ ಎಂಬ ಸಾಮರಸ್ಯ ಭಾವನೆಯನ್ನು ಕ್ರೀಡಾಕೂಟ ಬೆಳೆಸುತ್ತದೆ ಎಂದರು. ತಾಳಗುಪ್ಪ ವಲಯದ ಮೇಲ್ವಿಚಾರಕ ಪ್ರಶಾಂತ್ ಎಸ್., ಸೇವಾನಿರತ ಸಚಿನ್ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.