ಡಿನೋಟಿಫಿಕೇಷನ್ ದೂರು ರದ್ದತಿಗೆ ಬಿಎಸ್ವೈ ಸುಪ್ರೀಂ ಕೋರ್ಟಲ್ಲಿ ಅರ್ಜಿ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಸಿರಾಜಿನ್ ಬಾಷಾ ಲೋಕಾಯುಕ್ತಕ್ಕೆ ಸಲ್ಲಿಸಿರುವ ಡಿನೋಟಿಫಿಕೇಷನ್ ಸಂಬಂಧಿಸಿದ ದೂರುಗಳನ್ನು ರದ್ದುಗೊಳಿಸಲು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯನ್ನು ವಿಚಾರಣೆಗೆತ್ತಿಕೊಂಡಿರುವ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ನ್ಯಾಯಮೂರ್ತಿ ಸಿ. ನಾಗಪ್ಪನ್ ಅವರನ್ನೊಳಗೊಂಡ ಪೀಠವು ಪ್ರತಿವಾದಿ ಸಿರಾಜಿನ್ ಬಾಷಾ ಮತ್ತು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ರಾಜ್ಯಪಾಲರಿಂದ ಒಂದು ಪ್ರಕರಣ ದಾಖಲಿಸಲು ಅನುಮತಿ ಪಡೆದಿದ್ದ ದೂರುದಾರ ಸಿರಾಜಿನ್ ಬಾಷಾ ಐದು ದೂರುಗಳನ್ನು ದಾಖಲಿಸಿದ್ದಾರೆ ಎಂದು ಆಕ್ಷೇಪಿಸಿ ದೂರು ರದ್ದುಗೊಳಿಸಲು ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಪ್ರಕರಣಗಳನ್ನು ರದ್ದುಗೊಳಿಸಬೇಕೆಂದು ಯಡಿಯೂರಪ್ಪ ಮಾಡಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಮೆಸ್ಕಾಂ ಘಟಕ-5 ಶಾಖೆಯ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಭಾಗದಲ್ಲಿ ಫೆ.11ರ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎನ್.ಟಿ. ರಸ್ತೆ, ಮಂಡ್ಲಿ ಬೈಪಾಸ್ ರಸ್ತೆ, ಅಮೃತ ರೈಸ್ ಮಿಲ್ ವ್ಯಾಪ್ತಿ, ಹರಕೆರೆ, ಜಿಎಸ್ಕೆ ಎಂ ರಸ್ತೆ, ಸಿದ್ದಯ್ಯಸರ್ಕಲ್, ಗಾಂಧಿ ಬಜಾರ್ ಎಡಭಾಗ, ಬಿಬಿ ರಸ್ತೆ, ಕುಂಬಾರ ಗುಂಡಿ, ಆಜಾದ್ ನಗರ, ಕಲ್ಲಪ್ಪನಕೇರಿ, ಕೆರೆದುರ್ಗಮ್ಮನ ಕೇರಿ ಮತ್ತು ವಂದನಾ ಟಾಕೀಸ್ ಸುತ್ತಮುತ್ತ, ಓ.ಟಿ.ರಸ್ತೆ, ನ್ಯೂಮಂಡ್ಲಿ ಬೈಪಾಸ್ ರಸ್ತೆ, ಸೀಗೆಹಟ್ಟಿ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ನಾಳೆ ಯಕ್ಷಗಾನ
ಶಿವಮೊಗ್ಗ: ಯಕ್ಷ ಕುಟೀರ ಸಂಸ್ಥೆಯ ಮಕ್ಕಳು ಫೆ.12 ರಂದು ಸಂಜೆ 5.30 ಗಂಟೆಯಿಂದ ಕುವೆಂಪು ರಂಗಮಂದಿರದಲ್ಲಿ 'ರತಿ ಕಲ್ಯಾಣ' ಯಕ್ಷಗಾನ ಪ್ರಸ್ತುತಪಡಿಸಲಿದ್ದಾರೆ. ನೃತ್ಯಗುರು ಎ.ಆರ್. ಗಣಪತಿ ಹೆಗಡೆ ಪುರಪ್ಪೆಮನೆ ಮಾರ್ಗದರ್ಶನದಲ್ಲಿ ಭಾಗವತರಾಗಿ ರವೀಂದ್ರ ಭಟ್ ಅವಚೆ, ನಾಗಭೂಷಣ ಕೇಡಲಸರ ಮೃದಂಗ, ಭಾರ್ಗವ ಚಂಡೆಯಲ್ಲಿ ಸಹಕಾರ ನೀಡಲಿದ್ದಾರೆ. ಪ್ರವೇಶ ಉಚಿತವಿದ್ದು, ಕಲಾಸಕ್ತರು ಪಾಲ್ಗೊಳ್ಳುವಂತೆ ಸಂಸ್ಥೆ ಕೋರಿದೆ.
ಇಂದಿನಿಂದ ಮಾರಿಜಾತ್ರೆ
ತ್ಯಾಗರ್ತಿ: ಸಾಗರ ತಾಲೂಕಿನ ಗೌತಮಪುರ ಗ್ರಾಮದಲ್ಲಿ ಶ್ರೀಮಾರಿಕಾಂಬಾ ಜಾತ್ರೆ ಇದೇ ಫೆ.11ರಿಂದ 14ರ ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಪ್ರತಿ 5 ವರ್ಷಕ್ಕೊಮ್ಮೆ ಮಾರಿಜಾತ್ರೆ ನಡೆಸುವುದು ಇಲ್ಲಿನ ವಾಡಿಕೆಯಾಗಿದೆ. ಗೌತಮಪುರದಲ್ಲಿ ತಮಟೆ ಮತ್ತು ಹಲಗೆ ಬಾರಿಸುತ್ತಾ ಮನೆ-ಮನೆಗೂ ಮಾರಿಕೋಣ ಕರೆತರಲಾಯಿತು. ಪ್ರತಿ ಮನೆಯ ಮುತ್ತೈದೆಯರು ಪೂಜೆ ಸಲ್ಲಿಸಿ ದರು.