ನಿವೇಶನ ಹಗರಣ ತನಿಖೆ
ಶಿವಮೊಗ್ಗ: 1988ರಿಂದ 2011ರ ವರೆಗಿನ ಎಲ್ಲಾ ನಿವೇಶನ ಹಂಚಿಕೆಯನ್ನೂ ತನಿಖೆಗೊಳಪಡಿಸಲಾಗುವುದು ಎಂದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಹೇಳಿದ್ದಾರೆ.
ಸೂಡಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತ ನ್ಯಾಯಾಧೀಶ ಡಿ.ಎಸ್. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಸೂಡಾ ಆಯುಕ್ತರು, ನಗರಸಭೆ ಆಯುಕ್ತರು, ಜಿಲ್ಲಾ ನೋಂದಣಿ ಅಧಿಕಾರಿ ಈ ಸಮಿತಿಯಲ್ಲಿರುತ್ತಾರೆ. 30 ದಿನದೊಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದರು. ವಾಜಪೇಯಿ ಬಡಾವಣೆಯೂ ಸೇರಿದಂತೆ ಈ ಅವಧಿಯಲ್ಲಿ ಒಟ್ಟು 16 ಬಡಾವಣೆಗಳನ್ನು ರಚಿಸಲಾಗಿದೆ. ಈ ಎಲ್ಲಾ ಸಂದರ್ಭದ ನಿವೇಶನ ಹಂಚಿಕೆ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಶಾಸಕ ಪ್ರಸನ್ನ ಕುಮಾರ್ ಇತರರು ಇದ್ದರು.