ಮೈಸೂರು ಸ್ಯಾಂಡಲ್ ಉತ್ಪನ್ನ ಪ್ರದರ್ಶನ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.11 ಸುಮಾರು 40ಕ್ಕೂ ಹೆಚ್ಚು ಮೈಸೂರು ಸ್ಯಾಂಡಲ್ ಉತ್ಪನ್ನಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮೇಳ ನಗರದ ಕರ್ನಾಟಕ ಸಂಘ ಭವನದಲ್ಲಿ ಮಂಗಳವಾರ ಆರಂಭವಾಯಿತು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಆಯೋಜಿಸಿರುವ ಮೇಳ ಫೆ.20ರವರೆಗೆ ನಡೆಯುವುದು.
ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಸೂಪರ್ ಪ್ರೀಮಿಯಮ್ ಮೈಸೂರು ಸ್ಯಾಂಡಲ್ ಸೋಪು ಈ ಮೇಳದ ಪ್ರಮುಖ ಆಕರ್ಷಣೆ.
ಇದರ ಬೆಲೆ ರು. 720 ಇದಲ್ಲದೇ ವಿವಿಧ ಮಾದರಿಯ ಸೋಪುಗಳು, ಅಗರಬತ್ತಿ, ಹರ್ಬಲ್ ಹ್ಯಾಂಡ್ ವಾಷ್, ಕ್ಲೀನಾಲ್, ಬೇಬಿ ಪೌಡರ್, ಶ್ರೀಗಂಧ ಬಿಲ್ಲೆಗಳು, ಗಂಧದ ಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳು ಇಲ್ಲಿವೆ.
ಉದ್ಘಾಟನೆ: ಸೋಪ್ ಮೇಳವನ್ನು ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ ಉದ್ಘಾಟಿಸಿ, ಮೈಸೂರು ಸ್ಯಾಂಡಲ್ ಉತ್ಪನ್ನಗಳು ಜನಸಾಮಾನ್ಯರಿಗೆ ತಲುಪುವುದರ ಜೊತೆಗೆ ಜನಸಾಮಾನ್ಯರಲ್ಲಿ ಮೈಸೂರು ಸ್ಯಾಂಡಲ್ ಉತ್ಪನ್ನಗಳ ಬಗ್ಗೆ ಒಲವು ಮೂಡುವಂತೆ ಮಾಡಬೇಕು ಎಂದರು.
ನಮ್ಮ ಜೀವನದ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಬಹುರಾಷ್ಟ್ರೀಯ ಕಂಪನಿ ನೀಡುತ್ತಿರುವ ಭಾರಿ ಪ್ರಮಾಣದ ಪ್ರಚಾರದಲ್ಲಿ ಭಾರತೀಯ ವಸ್ತುಗಳು ಉಡುಗಿ ಹೋಗುತ್ತಿವೆ. ಆದರೆ, ಮೈಸೂರು ಸ್ಯಾಂಡಲ್ ಉತ್ಪನ್ನಗಳ ಪರಿಶುದ್ಧತೆ ಮತ್ತು ಗುಣಮಟ್ಟದಿಂದಲೇ ತನ್ನ ಇರುವಿಕೆಯನ್ನು ಇಂದಿನವರೆಗೂ ಸಮರ್ಥಿಸಿಕೊಂಡಿದೆ ಎಂದರು.
ಲಾಭದಾಯಕ ಹೆಜ್ಜೆ: ಸರ್ಕಾರಿ ಸಂಸ್ಥೆ ಎಂದರೆ ಸರ್ಕಾರದಿಂದಲೇ ಕೋಟ್ಯಂತರ ರು. ಅನುದಾನ ಪಡೆದು, ನಷ್ಟದಲ್ಲಿರುವ ಸಂಸ್ಥೆಗಳು ಎಂಬ ಕಳಂಕದಿಂದ ಹೊರಬಂದು ಹಲವು ಏಳುಬೀಳುಗಳ ನಡುವೆಯೂ ಸಂಸ್ಥೆ ಲಾಭದಾಯಕವಾಗಿ ನಡೆಯುತ್ತಿದ್ದು, ತನ್ನ ಆದಾಯದಲ್ಲಿ ಶೇ.10 ಲಾಭಾಂಶವನ್ನು ಸರ್ಕಾರಕ್ಕೆ ನೀಡುತ್ತಿರುವುದು ಹರ್ಷದ ಸಂಗತಿಯಾಗಿದೆ ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮೈಸೂರು ಅರಸರ ಆಡಳಿತದ ಅವಧಿಯಿಂದ ಆರಂಭವಾದ ಮೈಸೂರು ಸ್ಯಾಂಡಲ್ ಸಂಸ್ಥೆ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅವುಗಳನ್ನು ಗ್ರಾಹಕರು ಬಳಸಬೇಕು ಎಂದರು.
ಪ್ರತಿ ನಗರದಲ್ಲಿ ಸಂತೆ: ಮೈಸೂರು ಸ್ಯಾಂಡಲ್ ಉತ್ಪನ್ನಗಳು ಜನಸಾಮಾನ್ಯರಿಗೆ ತಲುಪಲು ರಾಜ್ಯದ ಪ್ರತಿ ನಗರಗಳಲ್ಲಿ ಸೋಪ್ ಸಂತೆಯನ್ನು ಆಯೋಜಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭಾ ಸದಸ್ಯ ಗೋಪಿನಾಥ್, ಮೈಸೂರು ಸ್ಯಾಂಡಲ್ ನಿಗಮದ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಪ್ರಕಾಶ್ರಾವ್ ಆಗಮಿಸಿದ್ದರು.
ರಮ್ಯಶ್ರೀ ಪಟ್ನಾಯಕ್ ಪ್ರಾರ್ಥಿಸಿದರು. ನಿಗಮದ ಮಾರುಕಟ್ಟೆ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಸಿ.ಎಂ. ಸುವರ್ಣಕುಮಾರ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಎ.ಸಿ. ಕೇಶವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್.ಬಿ. ಹರೀಶ್ ಕುಮಾರ್ ವಂದಿಸಿದರು.