'ಮೋದಿ ಪ್ರಧಾನಿಯಾಗಲು ನನಗೇ ಮತ ನೀಡಿ'
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.11
ಈಗ ಬರಲಿರುವುದು ಜನತೆಯ ಚುನಾವಣೆ. ದೇಶಕ್ಕೆ ಒಬ್ಬ ಸಮರ್ಥ ನಾಯಕ. ಜನರೇ ಅಪೇಕ್ಷೆ ಪಟ್ಟಂತೆ ಮೋದಿ ಪ್ರಧಾನಿ ಆಗಬೇಕಾದಾರೆ ಇಲ್ಲಿಂದಲೂ (ಶಿವಮೊಗ್ಗ ಲೋಕಸಭಾ ಕ್ಷೇತ್ರ) ಬಿಜೆಪಿ ಗೆಲ್ಲಬೇಕು. ಆದ್ದರಿಂದ ನನಗೆ ಮತ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿ ಚುನಾವಣಾ ಪ್ರಚಾರಕ್ಕೆ ಚಾಲನೆಯನ್ನೇ ನೀಡಿದರು.
ನಗರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಪ್ರಮುಖ ನಾಗರಿಕರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ನೇರವಾಗಿ ಮತಯಾಚನೆ ಮಾಡಿದರು.
ಪ್ರಾಮಾಣಿಕ ಯತ್ನ: ಶಿವಮೊಗ್ಗ ಅಭಿವೃದ್ಧಿಯನ್ನು ನೋಡಿದ್ದೀರಿ. ವಿಮಾನ, ರೈಲು ಇತ್ಯಾದಿ ಯೋಜನೆಗಳು ಬಂದಿವೆ. ಪ್ರಾಮಾಣಿಕವಾಗಿ ಅಭಿವೃದ್ಧಿಗೆ ಪ್ರಯತ್ನಿಸಿದೆ. ಏನೆಲ್ಲಾ ಅಭಿವೃದ್ಧಿ ಆಗಬೇಕು ಎಂದು ಈ ಸಭೆಯಲ್ಲಿ ಹೇಳಿದ್ದೀರೋ ಆ ಅಪೇಕ್ಷೆಗೆ ಸರಿಯಾಗಿ ಕೆಲಸ ಮಾಡುತ್ತೇನೆ. ಈ ಜನ್ಮದಲ್ಲಿ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರದ ಹಾಗೆ ನಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ತಪ್ಪು ಅರಿವು: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ನಾವು ಮಾಡಿದ ತಪ್ಪು ನಮಗೆ ಅರಿವಾಗಿದೆ. ಬೇರೆ ಬೇರೆ ಇದ್ದಾಗ ನಮ್ಮ ಸ್ಥಿತಿ ಏನು ಅಂತ ನಮಗೂ ಗೊತ್ತು. ಯಡಿಯೂರಪ್ಪರಿಗೂ ಗೊತ್ತು. ಇನ್ನು ಮುಂದೆ ಹಾಗೆ ಮಾಡೋಲ್ಲ. ತಪ್ಪು ತಿದ್ದಿಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದರು.
ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ. ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಮುಖಂಡರಾದ ಎಸ್. ರುದ್ರೇಗೌಡ, ಜ್ಯೋತಿಪ್ರಕಾಶ್, ಜ್ಞಾನೇಶ್ವರ್, ದತ್ತಾತ್ರಿ, ಕೈಗಾರಿಕೋದ್ಯಮಿ ನಂಜುಂಡ ಶೆಟ್ಟಿ, ಡಾ. ಶ್ರೀಧರ್ ಮೊದಲಾದವರು ಮಾತನಾಡಿದರು.