ಹಿಂದಿನ ಸರ್ಕಾರದ ತಪ್ಪಿನಿಂದ ಸಮಸ್ಯೆ
ಸಾಗರ: ಹಿಂದಿನ ಸರ್ಕಾರ ಮಾಡಿರುವ ಕೆಲವು ಕಾಯ್ದೆಯಿಂದಾಗಿ ಅರಣ್ಯಭೂಮಿ, ಕಾನು, ಸೊಪ್ಪಿನಬೆಟ್ಟದಲ್ಲಿ ಇದ್ದವರಿಗೆ ಹಕ್ಕುಪತ್ರ ನೀಡಲು ತೊಂದರೆಯಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಆಹಾರ, ನಾಗರೀಕ ಸರಬರಾಜು ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪಡಿತರ ಚೀಟಿ, ಬಗರ್ ಹುಕುಂ ಹಕ್ಕು ಪತ್ರ ಹಾಗೂ ಜೀವನಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ, ಮಲೆನಾಡಿನ ಜನರಿಗೆ ಮಾರಕವಾಗಿರುವ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆ ಈಗಾಗಲೇ ಕಂದಾಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
ಈಗಾಗಲೆ ತಾಲೂಕಿನಲ್ಲಿ 37705 ಜನರಿಗೆ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಎರಡನೇ ಹಂತದಲ್ಲಿ 6902 ಜನರಿಗೆ ಪಡಿತರಚೀಟಿ ವಿತರಣೆ ಮಾಡುವ ಉದ್ದೇಶ ಹೊಂದಲಾಗಿದ್ದು, ಈ ವಾರದಲ್ಲಿ ಕಾರ್ಡ್ ವಿತರಣೆ ಪೂರ್ಣಗೊಳಿಸಲಾಗುವುದು. ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದ್ದು ಎಲ್ಲಾ ನ್ಯಾಯಬೆಲೆ ಅಂಗಡಿಗಳು ಫೆಬ್ರವರಿ 1 ರಿಂದ ಫೆಬ್ರವರಿ 10ರವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಊಟದ ಸಮಯ ಹೊರತುಪಡಿಸಿ ಕಡ್ಡಾಯವಾಗಿ ತೆರೆದಿರಲೇ ಬೇಕು. ನಿಯಮ ಪಾಲನೆ ಮಾಡದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರ್ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಗ್ರಾಹಕರ ಹಿತರಕ್ಷಣೆ ಮಾಡಬೇಕು. ಗ್ರಾಹಕರು ತಪ್ಪು ನಡೆಯುತ್ತಿದ್ದರೆ ಅದನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ, ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಲು ಅವಕಾಶವಿದೆ ಎಂದರು.
ತಾಪಂ ಅಧ್ಯಕ್ಷ ಹರೀಶ್ ಗಂಟೆ, ಉಪಾಧ್ಯಕ್ಷೆ ಗೌರಮ್ಮ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ತಹಸೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ಪ್ರೊಬೇಷನರಿ ತಹಸೀಲ್ದಾರ್ ಭಾಗ್ಯಲಕ್ಷ್ಮೀ ಇದ್ದರು.