ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲೋಕೋಪಯೋಗಿ ವಿಶೇಷ ವಿಭಾಗ ಎತ್ತಂಗಡಿ

Rashmi Kasaragodu
Updated On : 13 Feb 2014, 11:32 am

ಶ್ರೀಕಾಂತ ಭಟ್
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲು ಮಾಡುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗವು ಬದಲಾದ ರಾಜಕೀಯ ವ್ಯವಸ್ಥೆಯಿಂದಾಗಿ ಎತ್ತಂಗಡಿಯಾಗಿದೆ.
ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ ತಾಲೂಕುಗಳನ್ನು ಒಳಗೊಂಡಂತೆ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಈ ವಿಭಾಗವನ್ನು ತುಮಕೂರು ಜಿಲ್ಲೆಯ ಮಧುಗಿರಿಗೆ ವರ್ಗಾಯಿಸಲು ಸರ್ಕಾರ ತೀರ್ಮಾನಿಸಿದೆ.
ಸುಮಾರು 429 ಕೋಟಿಯ ವಿವಿಧ ಕಾಮಗಾರಿ ಪ್ರಕ್ರಿಯೆಯಲ್ಲಿ ಈ ವಿಭಾಗ ಇದೀಗ ತೊಡಗಿಕೊಂಡಿದೆ. ಒಂದಷ್ಟು ಕಾಮಗಾರಿಗಳು ಸದ್ಯ ನಡೆಯುತ್ತಿದ್ದರೆ, ಮತ್ತಷ್ಟು ಟೆಂಡರ್ ಪ್ರಕ್ರಿಯೆಯಲ್ಲಿದೆ. ಹೀಗಾಗಿ ಏಕಾಏಕಿಯಾದ ಈ ನಿರ್ಧಾರದಿಂದ ಒಂದು ವ್ಯವಸ್ಥೆ ಹದಗೆಟ್ಟುಹೋಗುವುದರಲ್ಲಿ ಅನುಮಾನವೇ ಇಲ್ಲ. ಸರ್ಕಾರದ ಈ ನಿರ್ಧಾರದ ಹಿಂದೆ ರಾಜಕೀಯ ಘಾಟು ಕೂಡ ಬಡಿಯಲಾರಂಭಿಸಿದೆ.
ತಕ್ಷಣದ ಈ ಬೆಳವಣಿಗೆಯಿಂದ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಅಧಿಕಾರಿ ವರ್ಗವೂ ಕಂಗಾಲಾಗಿದೆ. ಶಾಲೆ- ಕಾಲೇಜಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯವೇನು ಎಂಬುದು ಒಂದು ಕಡೆಯಾದರೆ ವೃದ್ಧ ತಂದೆ-ತಾಯಿ, ಪೋಷಕರನ್ನು ಹೇಗೆ ಅಲ್ಲಿಗೆ ಕರೆದುಕೊಂಡು ಹೋಗಬೇಕೆಂಬುದೂ ಸಹ ಸವಾಲಿನ ವಿಷಯವಾಗಿದೆ. ಏಕೆಂದರೆ, ತಕ್ಷಣದಿಂದಲೇ ಮಧುಗಿರಿಗೆ ಈ ಕೇಂದ್ರ ವರ್ಗಾವಣೆಯಾಗಬೇಕೆಂಬುದು ಸರ್ಕಾರದ ಆದೇಶವಾಗಿದೆ.
ಏಕೆ ಬದಲಾವಣೆ? ಶಿವಮೊಗ್ಗ ವಿಶೇಷ ವಿಭಾಗದಲ್ಲಿ ಕೆಲಸದ ಒತ್ತಡ ಕಡಿಮೆ ಇದೆ, ತುಮಕೂರು ಜಿಲ್ಲೆಯಲ್ಲಿ ಕೆಲಸ ಒತ್ತಡ ಹೆಚ್ಚಾಗಿದೆ. ಹೀಗಾಗಿ ವಿಶೇಷ ವಿಭಾಗವನ್ನು ವರ್ಗಾಯಿಸಲಾಗುತ್ತಿದೆ ಎಂಬುದು ಸರ್ಕಾರ ಕೊಟ್ಟ ಕಾರಣ. ಆದರೆ, ಅಧಿಕಾರಿಗಳೇ ನೀಡುವ ಮಾಹಿತಿಯಂತೆ ತಕ್ಷಣಕ್ಕೆ ಸುಮಾರು 429 ಕೋಟಿ ರುಪಾಯಿ ಕಾಮಗಾರಿ ಇಲ್ಲಿ ನಡೆಯುತ್ತಿದೆ. ಇದು ಸಣ್ಣ ಕಾರ್ಯವೇನಲ್ಲ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದಾಗ ಕಾಮಗಾರಿಯನ್ನು ಸುಲಲಿತವಾಗಿ ನಿರ್ವಹಿಸುವ ಉದ್ದೇಶದಿಂದಾಗಿ ವಿಶೇಷ ವಿಭಾಗವನ್ನು ಇಲ್ಲಿ ಸ್ಥಾಪಿಸಲಾಗಿತ್ತು.
ಪ್ರಮುಖವಾಗಿ ಬಿ.ಎಚ್. ರಸ್ತೆ, ರೇಲ್ವೆ ಮೇಲು ಸೇತುವೆ, ಸುವರ್ಣ ಸಂಸ್ಕೃತಿ ಭವನ ಸೇರಿ ಹತ್ತಾರು ಸರ್ಕಾರಿ ಕಟ್ಟಡ, ರಸ್ತೆ ಕೈಗೆತ್ತಿಕೊಂಡಿದ್ದೇ ಈ ಇಲಾಖೆ ಮೂಲಕ. ಹಾಗೆಯೇ ಸದ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ, ಆಸ್ಪತ್ರೆ ಸಿಬ್ಬಂದಿ-ಅಧಿಕಾರಿಗಳ ವಸತಿ ಗೃಹ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ ಹೊಸ ಜೈಲು, ಹೊನ್ನಾಳಿ ಕಡೆ ಚತುಷ್ಪಥ ರಸ್ತೆ ನಿರ್ಮಿಸುವ ಹೊಣೆ ಹೊತ್ತುಕೊಂಡು ಕಾರ್ಯೋನ್ಮುಖವಾಗಿದೆ.
ವರ್ಗಾವಣೆಯಾದರೆ: ಹಾಲಿ ಇರುವ ವಿಶೇಷ ಘಟಕ ಶಿವಮೊಗ್ಗ ತಾಲೂಕು ಸೇರಿದಂತೆ, ತೀರ್ಥಹಳ್ಳಿ, ಭದ್ರಾವತಿಯ ವ್ಯಾಪ್ತಿಯನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇರುವ ಇಲಾಖೆ ಕಚೇರಿಯು ಉಳಿದ ತಾಲೂಕಿನ ವ್ಯಾಪ್ತಿಹೊಂದಿದೆ. ಈಗ ವಿಶೇಷ ಘಟಕ ಎತ್ತಂಗಡಿಯಾದರೆ ಇರುವ ಸಿಬ್ಬಂದಿ, ಇರುವ ವ್ಯವಸ್ಥೆಯ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.
ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣದ ಯೋಜನಾ ವರದಿ ತಯಾರು ಮಾಡುವುದರಿಂದ, ಟೆಂಡರ್ ಪ್ರಕ್ರಿಯೆವರೆಗೆ ಬಹುತೇಕ ಕೆಲಸ ಕಾರ್ಯಗಳನ್ನು ಈ ವಿಭಾಗ ನೋಡಿಕೊಳ್ಳುತ್ತಿತ್ತು. ಇದೀಗ ಇಷ್ಟೂ ಕೆಲಸಗಳು ಇನ್ನು ಮುಂದೆ ಸಾಮಾನ್ಯ ಇಲಾಖೆಯ ಹೆಗಲೇರಲಿದೆ. ಇದರಿಂದ ಯಾವುದೇ ಸರ್ಕಾರಿ ಯೋಜನೆ ಆರಂಭ, ಟೆಂಡರ್ ಪ್ರಕ್ರಿಯೆ ಎಲ್ಲವೂ ತಡವಾಗಲಿದೆ ಎಂದು ಸಿಬ್ಬಂದಿ ಕೊಡುವ ವಿವರಣೆ.
ಮರಳು ಆತಂಕ: ಶಿವಮೊಗ್ಗ ಜಿಲ್ಲೆಯ ಮರಳು ಗಣಿಗಾರಿಕೆ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗ ಪ್ರಮುಖ ಪಾತ್ರ ವಹಿಸುತ್ತಿದೆ. ಬ್ಲಾಕ್ ಗುರುತಿಸುವುದರಿಂದ ಹಿಡಿದು ಪರ್ಮಿಟ್ ನೀಡುವವರೆಗೆ ಎಲ್ಲ ನಿಗಾವಣೆ ಈ ಇಲಾಖೆಯದ್ದೇ. ಎರಡು ವರ್ಷದ ಹಿಂದೆ ಈ ಮೂಲಕ 22 ಕೋಟಿ ಸರ್ಕಾರಕ್ಕೆ ಆದಾಯ ತಂದುಕೊಟ್ಟಿತ್ತು. ಕಳೆದ ವರ್ಷ 10 ಕೋಟಿ ಆದಾಯ ತಂದಿತ್ತು. ಇದೀಗ ವಿಶೇಷ ವಿಭಾಗ ಎತ್ತಂಗಡಿಯಾದರೆ ಜಿಲ್ಲೆಯ ಮರಳು ಗಣಿಗಾರಿಕೆ, ಸಾಗಾಣಿಕೆ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂಬುದು ಲಾರಿ ಮಾಲೀಕರ ಅಳಲು.
ಮಧುಗಿರಿಯ ವ್ಯಾಪ್ತಿಯಲ್ಲಿ ಹೆಚ್ಚು ಕೆಲಸದ ಒತ್ತಡವಿದೆ ಎಂದಾದರೆ ಅಲ್ಲಿ ಹೊಸ ವಿಭಾಗ ಸೃಷ್ಟಿಸಲಿ. ಅದರ ಹೊರತಾಗಿ ಶಿವಮೊಗ್ಗದಲ್ಲಿ ನೆಲೆ ನಿಂತ ವಿಭಾಗವನ್ನು ಎತ್ತಂಗಡಿ ಮಾಡುವುದರ ಔಚಿತ್ಯವೇನು ಎಂಬ ಪ್ರಶ್ನೆ ಎದ್ದಿದೆ.
ಸರ್ಕಾರ ಆದೇಶ ಮಾಡಿದೆ, ಸರ್ಕಾರಿ ಕಚೇರಿ ಇನ್ನೂ ವರ್ಗಾವಣೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಸರ್ಕಾರದ ಮೇಲೆ ಒತ್ತಡ ತಂದರಷ್ಟೇ ವಿಶೇಷ ವಿಭಾಗ ಶಿವಮೊಗ್ಗದಲ್ಲಿ ಉಳಿಯಲಿದೆ, ಒಂದಷ್ಟು ಅನುಕೂಲವಾಗಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement