ಶಿಮೂಲ್‌ನಿಂದ ರೈತರಿಗೆ ಬಂಪರ್
ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟವು ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ಗೆ 3 ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದೆ. ಇದರಿಂದಾಗಿ ಸರ್ಕಾರ ಕೊಡುತ್ತಿರುವ 4 ಪ್ರೋತ್ಸಾಹ ಧನ ಸೇರಿ ಈಗ ರೈತರಿಗೆ ಒಟ್ಟು 28.15 ಸಿಗಲಿದೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಎಲ್. ಜಗದೀಶ್ವರ್ ಅವರು ಈ ವಿಷಯ ತಿಳಿಸಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶಿಮುಲ್ 400 ಕೋಟಿಗಳಷ್ಟು ವ್ಯವಹಾರ ಮಾಡಿದೆ. ಸುಮಾರು 8 ಕೋಟಿ ಲಾಭ ಗಳಿಸಿದೆ. ಹೀಗೆ ಗಳಿಸಿದ ಲಾಭವನ್ನು ರೈತರಿಗೇ ಹಿಂತಿರುಗಿಸುವ ದಿಸೆಯಲ್ಲಿ ಈ ಘೋಷಣೆ ಮಾಡಿದೆ. ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರು ಇದರ ಲಾಭ ಪಡೆಯಲಿದ್ದಾರೆ ಎಂದರು.
ಕಳೆದ ಸಾಲಿನಲ್ಲಿ 3 ಕೋಟಿ ಲಾಭ ಬಂದಿದ್ದು, ಈ ಬಾರಿ ಹೆಚ್ಚಾಗಿದೆ. ಒಟ್ಟಾರೆ ಒಕ್ಕೂಟ ಪ್ರಗತಿ ಪಥದಲ್ಲಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಹಾಲು ಉತ್ಪಾದಕರಿಗೆ ನೆರವು ನೀಡಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
23 ಬಿಎಂಸಿ ಕೇಂದ್ರ ಸ್ಥಾಪನೆ: ಒಕ್ಕೂಟವು ತನ್ನ ವ್ಯಾಪ್ತಿಯೊಳಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಾಗರ ತಾಲೂಕಿನ ಆನಂದಪುರ ಸೇರಿದಂತೆ ಹಲವೆಡೆ ಹಾಲು ಶೀಥಲೀಕರಣ ಘಟಕ ಸ್ಥಾಪಿಸಿದೆ. ಇದರಿಂದ ಸುತ್ತಮುತ್ತಲಿನ ಹಾಲು ಉತ್ಪಾದಕರ ಸಂಘಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಎನ್ ಡಿಡಿಬಿ ಸಹಯೋಗದೊಂದಿಗೆ ಜಿಲ್ಲೆಯಲ್ಲಿ 23 ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಹಾಲಿನ ಗುಣಮಟ್ಟ ಕಾಪಾಡುವಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದರು.
ಶಿಮೂಲ್ ಘಟಕದಲ್ಲಿ ಸಭಾಂಗಣ ನಿರ್ಮಿಸಲಾಗಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು 25 ಲಕ್ಷ ವೆಚ್ಚದ ಹೈಟೆಕ್ ಪಾರ್ಲರ್ ನಿರ್ಮಿಸಲಾಗಿದೆ. ಈಗಾಗಲೇ ಮೈಸೂರು ಪಾಕ್, ಪೇಡ, ಕೋವಾ, ಪನ್ನೀರ್ ಉತ್ಪಾದಿಸುತ್ತಿದ್ದು, ಬೇಸಿಗೆ ವೇಳೆಗೆ ಮ್ಯಾಂಗೋ ಲಸ್ಸಿಯನ್ನು ಮಾರುಕಟ್ಟೆಗೆ ಬಿಡಲಾಗುವುದು ಎಂದರು.
ಹೆಣ್ಣು ಕರುಗಳಿಗೆ ನೆರವು: ಹೆಣ್ಣು ಕರುಗಳಿಗೆ ನೆರವಾಗಲು ಕೇಂದ್ರ ಸರ್ಕಾರವು ಆರ್‌ಕೆವಿವೈ ಯೋಜನೆ ಅಡಿ ಯೋಜನೆ ರೂಪಿಸಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 1,500 ಕರುಗಳಿಗೆ ತಲಾ 3 ಸಾವಿರ ನೆರವು ನೀಡಲಾಗುವುದು. ರೈತರಿಗೆ ಕೂಪನ್ ನೀಡಿ, ಕಾಲಕಾಲಕ್ಕೆ ಅವರು ಕರುವಿಗೆ ಆಹಾರ, ಔಷಧಿ ಖರೀದಿಸಬಹುದು ಎಂದು ಜಗದೀಶ್ವರ್ ಹೇಳಿದರು.
ಕರು ಜನಿಸಿದ 10 ದಿನದೊಳಗೆ ನೋಂದಣಿ ಮಾಡಬೇಕು ಎಂದರು. ವ್ಯವಸ್ಥಾಪಕ ನಿರ್ದೇಶಕ ವಿ.ಎಸ್. ಅಕ್ಕಿ, ಈ ಬಾರಿ 97 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರದ ನಿಯಮದಂತೆಯೇ ನೇಮಕಾತಿ ನಡೆದಿದೆ ಎಂದರು.
ಹೊಸ ತಳಿಗಳ ವೀರ್ಯ ನಳಿಕೆಗೆ 100 ಸಹಾಯಧನ ನೀಡುತ್ತಿದ್ದೇವೆ ಎಂದ ಅವರು, ಪ್ರತಿನಿತ್ಯ 3 ಲಕ್ಷ ಕಿಲೋ ಹಾಲು ಖರೀದಿಸಲಾಗುತ್ತಿದೆ. ವಾರ್ಷಿಕ 253 ಕೋಟಿಗಳನ್ನು ಖರೀದಿಗೆ ವ್ಯಯಿಸಲಾಗುತ್ತಿದೆ ಎಂದರು.