ಇಂದಿನಿಂದ ನರವಿಜ್ಞಾನ ಸಮ್ಮೇಳನ
ಶಿವಮೊಗ್ಗ: ನಾಲ್ಕನೇ ರಾಜ್ಯಮಟ್ಟದ ನರವಿಜ್ಞಾನ ಸಮ್ಮೇಳನವು ಶಿವಮೊಗ್ಗದಲ್ಲಿ ಫೆ.14ರಿಂದ 3 ದಿನ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಕಾಲೇಜಿನ ಅನಾಟಮಿ ಸಭಾಂಗಣ ಹಾಗೂ ಆಯ್ದ ಸ್ಥಳದಲ್ಲಿ ನಡೆಯಲಿದೆ.
ನರರೋಗ ತಜ್ಞ ಡಾ. ಶಿವರಾಮಕೃಷ್ಣ ಅವರ ನೇತೃತ್ವದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಅನೇಕ ನರವಿಜ್ಞಾನಿಗಳು ಪಾಲ್ಗೊಳ್ಳುವರು. ಸಹ್ಯಾದ್ರಿ ನರ ಮತ್ತು ಮನೋರೋಗ ತಜ್ಞರ ಸಂಘ, ಭಾರತೀಯ ವೈದ್ಯಕೀಯ ಸಂಘ, ಸಿಮ್ಸ್ ಕಾಲೇಜುಗಳ ಸಹಯೋಗದಲ್ಲಿ ಈ ಸಮ್ಮೇಳನ ನಡೆಯುವುದು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವರಾಮಕೃಷ್ಣ ಅವರು ಕಾರ್ಯಕ್ರಮದ ವಿವರ ನೀಡಿದರು.
ಉದ್ಘಾಟನಾ ಕಾರ್ಯಕ್ರಮವು ಫೆ.15ರಂದು ಬೆಳಗ್ಗೆ 9 ಗಂಟೆಗೆ ಸಿಮ್ಸ್ ಕಾಲೇಜಿನ ಅನಾಟಮಿ ಸಭಾಂಗಣದಲ್ಲಿ ನಡೆಯಲಿದ್ದು, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಮದನ್ ಗೋಪಾಲ್ ಉದ್ಘಾಟಿಸುವರು. ನಿಮ್ಹಾನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ಜಿ.ಎನ್. ನಾರಾಯಣ ರೆಡ್ಡಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ನಿಫೆ.16ರಂದು 9 ಗೋಷ್ಠಿಗಳು ನಡೆಯುವವು. ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯುವುದು. ಫೆ.15ರಂದು ಸಂಜೆ 5 ಗಂಟೆಗೆ ಐಎಂಎ ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ನರರೋಗ ತಜ್ಞ ಡಾ. ಜನಾರ್ದನ ಅವರಿಂದ ಅಪಸ್ಮಾರ ಕಾಯಿಲೆ ಬಗ್ಗೆ ಉಪನ್ಯಾಸವಿರುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಡಾ. ಕೆ.ಆರ್. ಶ್ರೀಧರ್, ಡಾ. ನಾಗರಾಜ್, ಡಾ. ವಾಮನ್ ಶಾನ್ ಭಾಗ್, ಡಾ. ಹರೀಶ್ ದೆಲಂತಬೆಟ್ಟು, ಡಾ. ನಾರಾಯಣ ಇದ್ದರು.