ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಾಠ ಹೇಳುವ ನೈತಿಕತೆ ಬಿಜೆಪಿಗಿಲ್ಲ

Vishwanath S
Updated On : 14 Feb 2014, 1:55 am

ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.13 ಕಾಂಗ್ರೆಸ್‌ನವರಿಗೆ ನೈತಿಕತೆ ಪಾಠ ಹೇಳುವ ಅರ್ಹತೆ ಜೈಲಿಗೆ ಹೋದ, ಭ್ರಷ್ಟಾಚಾರದಲ್ಲಿ ಸಿಲುಕಿದವರ ಪಕ್ಷವಾದ ಬಿಜೆಪಿ ನಾಯಕರಿಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಜನರ ಮುಂದೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಹೇಳಿರುವುದು ಹಾಸ್ಯಾಸ್ಪದ. ಭ್ರಷ್ಟಾಚಾರ ಆರೋಪ ಎದುರಿಸಿದವರು, ಪಕ್ಷಾಂತರ ಮಾಡಿದವರಿಂದ ನಾವು ನೈತಿಕತೆಯ ಪಾಠ ಕೇಳಬೇಕಿಲ್ಲ ಎಂದರು.
ಕೋಟ್ಯಂತರ ರು. ಲೂಟಿ: ಶಿವಮೊಗ್ಗ ನಗರಸಭೆ ಅಧಿಕಾರ ಹಿಡಿದಿದ್ದ ಬಿಜೆಪಿ ಹಸಿರೀಕರಣದ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದೆ. ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆಯಲ್ಲೂ ಸಾಕಷ್ಟು ಅಕ್ರಮವಾಗಿದೆ. ಇಷ್ಟೊಂದು ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್‌ಗೆ ನೀತಿ ಪಾಠ ಹೇಳುತ್ತಿರುವುದು ವಿಪರ್ಯಾಸ ಎಂದರು.
ಸಾಮಾನ್ಯವಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹಿಂದಿನ ಸರ್ಕಾರದ ಯೋಜನೆಗಳನ್ನು ರದ್ದುಪಡಿಸುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಹಿಂದಿನ ಸರ್ಕಾರದ ಯೋಜನೆ ಮುಂದುವರೆಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಇಡೀ ರಾಜ್ಯವನ್ನು ಒಂದೇ ಸಮನಾಗಿ ಕಾಣುತ್ತಿದ್ದಾರೆ ಎಂದ ಅವರು, ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಯಡಿಯೂರಪ್ಪ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.
ಒಪ್ಪಿಕೊಂಡ ಬಿಜೆಪಿ: ಗುಜರಾತ್ ರಾಜ್ಯವನ್ನು ಮಾತ್ರ ಮಾದರಿ ರಾಜ್ಯ, ಮೋದಿ ಮಾತ್ರ ಮಾದರಿ ಸಿಎಂ ಎನ್ನುವ ಬಿಜೆಪಿ ತನ್ನದೇ ಪಕ್ಷ ಅಧಿಕಾರದಲ್ಲಿರುವ ಇತರೆ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ ಎಂಬುದನ್ನು ಸ್ವತಃ ಒಪ್ಪಿಕೊಂಡಿದೆ ಎಂದು ಟೀಕಿಸಿದರು.
ಮೋದಿಯನ್ನು ಪ್ರಧಾನಿ ಮಾಡಲು ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿಲ್ಲ. ಅಧಿಕಾರದ ಆಸೆಯಿಂದ ಮಾತೃಪಕ್ಷಕ್ಕೆ ಹಿಂದಿರುಗಿದ್ದಾರೆ ಎಂದು ಪ್ರಸನ್ನ ಕುಮಾರ್ ಟೀಕಿಸಿದರು.
ಈಶ್ವರಪ್ಪಗೆ ಬಾಯಿ ಚಪಲ: ಸಿಎಂ ಸಿದ್ದರಾಮಯ್ಯಗೆ ಇದೇ ಕೊನೆ ಬಜೆಟ್ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇತ್ತೀಚೆಗೆ ಅವರು ರಾಜಕೀಯದ ಜೊತೆಗೆ ಭವಿಷ್ಯ ಹೇಳುವುದಕ್ಕೂ ಶುರು ಮಾಡಿದ್ದಾರೆ ಎಂದು ಆರ್. ಪ್ರಸನ್ನಕುಮಾರ್ ವ್ಯಂಗ್ಯವಾಡಿದರು.
ಈಶ್ವರಪ್ಪಗೆ ಬಾಯಿ ಚಪಲ ಜಾಸ್ತಿ. ಮೊದಲಿನಿಂದಲೂ ಅವರು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಅವರು ಶಾಸ್ತ್ರ ಹೇಳಲು ಅನುಕೂಲವಾಗುವಂತೆ ಮಳಿಗೆ ಹುಡುಕಿಕೊಡಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡುತ್ತೇನೆ ಎಂದರು.
ಆಯನೂರು ಉತ್ತಮ ಮಾತುಗಾರ. ತಾವು ಯಾವ ಪಕ್ಷದಲ್ಲಿ ಇರುತ್ತಾರೋ ಅದನ್ನು ಸಮರ್ಥಿಕೊಳ್ಳುತ್ತಾರೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಬಿಜೆಪಿ ವಿರುದ್ಧವೂ ಟೀಕೆ ಮಾಡಿದ್ದರು. ಅದನ್ನು ಮರೆತಂತಿದೆ ಎಂದು ಹೇಳಿದರು.
ಗೆಲವು ನಮ್ಮದೇ: ಕೆಜೆಪಿ-ಬಿಜೆಪಿ ವಿಲೀನವಾದ ಕೂಡಲೇ ಯಾವುದೇ ಪವಾಡ ಸಂಭವಿಸಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಯನ್ನು ಬಿರುಗಾಳಿ, ಯಡಿಯೂರಪ್ಪ ಅವರನ್ನು ಸುಂಟರಗಾಳಿ ಎಂದೆಲ್ಲಾ ಬಿಜೆಪಿಯವರು ಕರೆದುಕೊಳ್ಳುತ್ತಿದ್ದಾರೆ. ಇವರೆಡೂ ಅಂತಿಮವಾಗಿ ಮಾಡುವುದು ಅನಾಹುತವನ್ನೇ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಪಿ. ದಿನೇಶ್, ರವಿಕುಮಾರ್, ಪಿ. ರುದ್ರೇಶ್, ವಿಶ್ವನಾಥ ಕಾಶಿ ಮುಂತಾದವರಿದ್ದರು.
ನಿವೇಶನ ಅಕ್ರಮಗಳ ತನಿಖೆ: ಶಾಸಕ ಪ್ರಸನ್ನ ಕುಮಾರ್
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ವಿತರಿಸಲಾಗಿರುವ ನಿವೇಶನಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು. ಹಂತಹಂತವಾಗಿ ಸೂಡಾದಿಂದ ವಿತರಣೆಯಾದ ಎಲ್ಲಾ ನಿವೇಶನಗಳ ಬಗ್ಗೆಯೂ ಸಮರ್ಪಕ ತನಿಖೆ ನಡೆಯಲಿದೆ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಶಿವಮೊಗ್ಗ ನಗರಸಭೆ ಹಸುರೀಕರಣ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಆಡಿಟ್ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಅಂಶಗಳ ಬಗ್ಗೆ ಇಲಾಖೆಯಿಂದ ತನಿಖೆ ನಡೆಸಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement