'ಬದುಕಿನ ಮೌಲ್ಯಕ್ಕೆ ಸಮಾಜ ಜಾಗೃತಿ ಅಗತ್ಯ'
ಕ.ಪ್ರ.ವಾರ್ತೆ ಸೊರಬ ಫೆ.13 ಜಗತ್ತಿನಲ್ಲಿ ದೇವರು ಮತ್ತು ಧರ್ಮ ಎಂಬ 2 ಕಾರಣಗಳಿಗಾಗಿ ಭಯೋತ್ಪಾದನೆ ನಡೆಯುತ್ತಿದೆ ಎಂದು ಸಾಹಿತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಜರಗನಹಳ್ಳಿ ಶಿವಶಂಕರ್ ತಿಳಿಸಿದರು.
ಬುಧವಾರ ರಾತ್ರಿ ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ನಡೆದ 4 ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಗೃತಿ ಅಗತ್ಯ: ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡದೇ ಹೋದಲ್ಲಿ ಬದುಕಿನ ಮೌಲ್ಯವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಭವಿಷ್ಯವನ್ನು ಮಾರಾಟದ ಬೂಟಾಟಿಕೆಯ ವಸ್ತುವನ್ನಾಗಿಸಿ ಬಳಸಿಕೊಳ್ಳುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದ್ದು, ಸಮಾಜ ಮೌಢ್ಯತೆಗೆ ಬಲಿಯಾಗುವಂತಾಗಿದೆ.
ಇದಕ್ಕೆ ಸಮಗ್ರ ಉತ್ತರ ಸಿಗಲು ವಚನ ಸಾಹಿತ್ಯದ ಅಧ್ಯಯನ ಆಗಬೇಕಿದೆ. ಇದರ ಬಗ್ಗೆ ಮಕ್ಕಳಿಗೆ ಬೋಧಿಸಬೇಕಿದೆ. ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಸ್ವಾಮೀಜಿಗಳು ಮುಂದಾಗುವ ಅಗತ್ಯವಿದೆ ಎಂದರು.
ಆಂಗ್ಲ ವಿದ್ಯಾಂಸ ಎಸ್.ಕೆ. ಭಗವಾನ್ ಮಾತನಾಡಿ, ನಮ್ಮ ಶಾಲಾ ಕಾಲೇಜುಗಳಲ್ಲಿ ಬೋಧಿಸುವ ಇತಿಹಾಸ ಶೇ. 50 ಮಾತ್ರ ಸತ್ಯವಾಗಿರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಇದನ್ನು ಪರೀಕ್ಷಾ ದೃಷ್ಟಿಯಿಂದ ಮಾತ್ರ ಸ್ವೀಕರಿಸಬೇಕು. ಕಂದಾಚಾರ ಮೌಢ್ಯಗಳ ವಿರುದ್ಧ ಸದಾ ಎಚ್ಚರವಾಗಿರಬೇಕು. 12 ನೇ ಶತಮಾನದಲ್ಲಿ ಕಾಯಕ ಚಳವಳಿಯಂತೆ ಇಂದು ಜ್ಞಾನದ ಚಳವಳಿಕೆಯಾಗಬೇಕಿದೆ ಎಂದರು.
ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು, ದುಂಡಸಿ ವಿರಕ್ತಮಠದ ಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಶಿವಮೊಗ್ಗ ಬಸವಕೇಂದ್ರದ ಬಸವಮರುಳ ಸಿದ್ದಮಹಾಸ್ವಾಮಿ, ಹಾರನಹಳ್ಳಿ ನೀಲಕಂಠಸ್ವಾಮಿ, ರಾಮದುರ್ಗದ ಶಾಂತವೀರ ಶ್ರೀ, ಜಡೆ ಹಿರೇಮಠದ ಘನಬಸವ ಅಮರೇಶ್ವರಸ್ವಾಮಿ, ಶಿಕಾರಿಪುರದ ಚನ್ನಬಸವಸ್ವಾಮಿ, ತಿಳವಳ್ಳಿ ನಿರಂಜನಸ್ವಾಮಿ, ದುಗ್ಗಲಿ ಮುರುಘಾರಾಜೇಂದ್ರ, ಚಿಕ್ಕರಿಯಪ್ಪ, ರಮಣಿ ಕೊಟ್ಟೂರೇಶ್ವರ, ರಾಜಶೇಖರ ಪಾಟೀಲ್ ನೆಗವಾಡಿ ಮೊದಲಾದರು ಇದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕತ್ತಿಗೆ ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬೆನಕಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ ಗೋಖಲೆ ವಂದಿಸಿದರು.