100 ಮಾದರಿ ವಸತಿ ಶಾಲೆ: ಸಚಿವ ಆಂಜನೇಯ
ಶಿಕಾರಿಪುರ: ಅಧಿಕಾರವಧಿಯಲ್ಲಿ ಪ್ರತಿ ಹೋಬಳಿ ಕೇಂದ್ರಗಳಿಗೆ ತಲಾ ಒಂದರಂತೆ ಕನಿಷ್ಠ 100 ಕಿತ್ತೂರು ರಾಣಿ ಚನ್ನಮ್ಮ ಮಾದರಿ ವಸತಿ ಶಾಲೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಎಚ್.ಆಂಜನೇಯ ಪ್ರಕಟಿಸಿದರು.
ತಾಲೂಕಿನ ಅಂಬಾರಗೊಪ್ಪ ಗ್ರಾಮದ ಸಮೀಪದಲ್ಲಿ ಶನಿವಾರ 4.82 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಂಕಲ್ಪ: ರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ಗುರಿಯ ಮೇರೆಗೆ ಆರಂಭವಾಗಿರುವ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 6 ರಿಂದ 10 ರವರೆಗಿನ ತರಗತಿಗಳನ್ನು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ವಸತಿ ಶಾಲೆಯ ಪ್ರತಿ ವಿದ್ಯಾರ್ಥಿಗೆ 1000 ಪ್ರತಿ ತಿಂಗಳು ವ್ಯಯಿಸಲು ಬಜೆಟ್ನಲ್ಲಿ ಅನುಮೋದಿಸಲಾಗಿದೆ. ಪ್ರತಿ ವಸತಿ ಶಾಲೆಯಲ್ಲಿ ಸ್ಥಳೀಯರಿಗೆ ಶೇ.50 ಮೀಸಲಿಗೆ ನಿರ್ಧರಿಸಲಾಗಿದೆ. ಪ್ರತಿ ಹೋಬಳಿಮಟ್ಟದಲ್ಲಿ ವಸತಿ ಶಾಲೆ ಆರಂಭಕ್ಕೆ ಸಂಕಲ್ಪ ಕೈಗೊಂಡಿರುವುದಾಗಿ ಘೋಷಿಸಿದರು.
ಮನವಿ: ಅಧ್ಯಕ್ಷತೆ ವಹಿಸಿದ್ದ ಮಾಜಿ ಸಿಎಂ, ಶಾಸಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ತಾಲೂಕಿನ ಸಂಡ ಗ್ರಾಮದಲ್ಲಿ ನೂತನ ಪ.ಜಾತಿ, ಪ.ಪಂಗಡದ ಮೊರಾರ್ಜಿ ದೇಸಾಯಿ ಶಾಲೆ ಮಂಜೂರಾತಿಗೆ ಮನವಿ ಮಾಡಿ ಚುನಾವಣೆ ನಂತರದಲ್ಲಿ ಶಿಲಾನ್ಯಾಸಕ್ಕೆ ಸಚಿವರನ್ನು ಆಹ್ವಾನಿಸಿದರು.
ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಸರೋಜಮ್ಮ, ಜಿ.ಪಂ. ಸದಸ್ಯ ಬಂಗಾರಿನಾಯ್ಕ್, ಕೆ.ಎಸ್. ಈಶ್ವರಪ್ಪ, ಶಾಂತಮ್ಮ, ಎಪಿಎಂಸಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಕುಮಾರ್, ತಹಸೀಲ್ದಾರ್ ಧರ್ಮೋಜಿರಾವ್, ಇಒ ಚಂದ್ರಶೇಖರ್, ಮುಖಂಡ ನಗರದ ಮಹಾದೇವಪ್ಪ, ಗುರುಮೂರ್ತಿ, ಚನ್ನವೀರಪ್ಪ, ಭೂಕಾಂತ್, ರುದ್ರಪ್ಪಯ್ಯ, ಶೇಖರಪ್ಪ, ಪ್ರವೀಣಶೆಟ್ಟಿ, ಬಿಇಒ ಸಿದ್ದಲಿಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಾಲರಾಜ್, ಜಿಲ್ಲಾ ಹಿಂದುಳಿದ ವರ್ಗ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.