ಸಮಾಜಕ್ಕೆ ಸಲ್ಲಿಸುವ ಸೇವೆ ವ್ಯರ್ಥವಲ್ಲ: ವಿದ್ಯಾಧಿರಾಜ ಶ್ರೀ
ಹೊಸನಗರ: ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಧರ್ಮದ ಕಾರ್ಯ ಮತ್ತು ಸಮಾಜಸೇವೆ ಮುಖ್ಯ ಪಾತ್ರ ವಹಿಸುತ್ತದೆ. ಸಮಾಜದ ಒಳಿತಿಗಾಗಿ ಮಾಡಿದ ಕಾರ್ಯ ವ್ಯರ್ಥವಾಗುವುದಿಲ್ಲ ಎಂದು ಗೋವಾದ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ನಗರದ ಗುಜರಿಪೇಟೆ ವೆಂಕಟರಮಣ ಕಲಾಭವನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಯಾವುದೇ ಕಾರ್ಯವಾದರೂ ನಿಷ್ಠೆಯಿಂದ ಮಾಡಬೇಕು ಎಂದರು.
ಈ ಸಂದರ್ಭ ನಗರ ಆಗಮಿಸಿದ ಶ್ರೀಗಳನ್ನು ಫೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಪಾದಪೂಜೆ ನೆರವೇರಿಸಲಾಯಿತು. ನಗರ ಗುಜರಿಪೇಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು.
ತೀರ್ಥಹಳ್ಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ರಾಮದಾಸ್ ಕಾಮತ್, ಪ್ರಮುಖರಾದ ಶ್ರೀನಿವಾಸ ಕಾಮತ್, ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ವೇದಮೂರ್ತಿ ರಮಾನಂದ ಭಟ್ ಪ್ರಾರ್ಥಿಸಿದರು. ಕೆ.ಭಾಸ್ಕರಭಟ್ ಸ್ವಾಗತಿಸಿದರು. ಸುರೇಶ್ ಭಟ್ ವಂದಿಸಿದರು.