ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸಾಹಿತ್ಯಕ್ಕೆ ಉತ್ಸಾಹ ತುಂಬುವ ಶಕ್ತಿ ಇದೆ'ಛಿ

Mainashree
Updated On : 16 Feb 2014, 11:19 am

ಕ.ಪ್ರ.ವಾರ್ತೆ  ತೀರ್ಥಹಳ್ಳಿ  ಫೆ.15
ಚಿಣ್ಣರ ಕಲರವದಲ್ಲಿ ಮನಸೂರೆಗೊಂಡ ಮಕ್ಕಳ ಸಾಹಿತ್ಯ ಸಮ್ಮೇಳನ. ದೊಡ್ಡವರನ್ನೂ ಎಚ್ಚರಗೊಳಿಸುವ, ಚಿಂತನೆಗೆ ಹಚ್ಚುವ ನುಡಿಮುತ್ತುಗಳು ಮಕ್ಕಳ ಬಾಯಿಂದ ಬಂದಿತು.   
ತೀರ್ಥಹಳ್ಳಿ ತಾಲೂಕು ಕಸಾಪ ನೇತೃತ್ವದಲ್ಲಿ ಶನಿವಾರ ತಾಲೂಕುಮಟ್ಟದ 3ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನೆರವೇರಿತು. ಮೇಲಿನಕುರುವಳ್ಳಿಯ ವಾಗ್ದೇವಿ ಬಿಎಡ್ ಕಾಲೇಜು ಆವರಣದಲ್ಲಿ ವೇದಿಕೆಯಲ್ಲಿ ಕು.ಆನಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮ್ಮೇಳನಾಧ್ಯಕ್ಷರಾದ ಕು. ಎನ್.ಆನಂ ಮಾತನಾಡಿ, ಸಾಹಿತ್ಯಕ್ಕೆ ಸಾವು, ಬದುಕಿನ ಹೋರಾಟ ನಡೆಸುವ ವ್ಯಕ್ತಿಯಲ್ಲೂ ಉತ್ಸಾಹ ತುಂಬುವ ಶಕ್ತಿ ಇದೆ. ನಮಗೆ ಹಿಂದಿನ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸುವ, ಕಾಲದ ಸತ್ವ ತಿಳಿಸುವ ಮೂಲಕ ಹಿಂದಿನ ಎಲ್ಲ ಸಾಹಿತಿಗಳೂ ಸಾಕಷ್ಟು ಸುದೀರ್ಘ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಈ ರೀತಿಯ ಸಾಹಿತಿಗಳು ದುಡಿದು, ಭಾಷಾ ಶ್ರೀಮಂತಿಕೆ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಕೊಡುಗೆ ಅಪಾರ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು, ಕನ್ನಡದ ಅಭಿನವ ಕಾಳಿದಾಸ ಎಂದೇ ಪ್ರಖ್ಯಾತವಾದ ಎಸ್. ವಿ. ಪರಮೇಶ್ವರ ಭಟ್ಟರು,   ಡಾ. ಅನಂತಮೂರ್ತಿ, ತೇಜಸ್ವಿ, ಕಮಕೋಡು ನರಸಿಂಹ ಶಾಸ್ತ್ರಿಗಳು, ಎಂ.ಕೆ. ಇಂದಿರಾ, ಡಾ. ಹಾ.ಮಾ. ನಾಯಕ್, ಕನ್ನಡಪರ ಹೋರಾಟಗಾರ ಕೋಣಂದೂರು ಲಿಂಗಪ್ಪ ಮುಂತಾದವರ ಪಡೆ ತೀರ್ಥಹಳ್ಳಿ ಮಣ್ಣಿನ ಮಕ್ಕಳು ಎಂದರು.  
ಟಿವಿ, ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ಚಲನಚಿತ್ರಗಳು, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯ ನಾನಾ ಮಾಧ್ಯಮಗಳು  ನಮ್ಮ ಸಂಸ್ಕೃತಿಯ ಜಾಡನ್ನೇ ಬದಲಾಯಿಸಲು ಪಣ ತೊಟ್ಟಂತೆ ಕಾಣುತ್ತಿವೆ. ಇವುಗಳ ಉಗ್ರ ದಾಳಿಗೆ ಸಾಹಿತ್ಯ, ಸಾಂಸ್ಕೃತಿಕ ಲಲಿತ ಕಲೆಗಳ ಉಸಿರು ಕಟ್ಟುವಂಥ ಸ್ಥಿತಿ ಬಂದಿದೆ ಎಂದರು.   
ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನ ದೊಡ್ಡವರ ಕಣ್ಣು ತೆರೆಸುವಂತಿದೆ. ಇಂತಹ ಸಮ್ಮೇಳನಗಳು ಬೇಕು. ಇಲ್ಲಿ ದೊಡ್ಡ ಕನಸುಗಳು ನಿರ್ಮಾಣವಾಗುತ್ತವೆ. ಇಂದಿನ ದಿನಗಳಲ್ಲಿ ಶಿಕ್ಷಣದ ವ್ಯವಸ್ಥೆಯಲ್ಲಿ ತಂದೆ ತಾಯಿಗಳೇ ಶಿಕ್ಷಕರಾಗಬೇಕಾದ ಪರಿಸ್ಥತಿ ನಿರ್ಮಾಣವಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ನಿರಂತರತೆ ಇದ್ದರೆ ಹೊಸ ಆಯಾಮಗಳೂ ಬಿಚ್ಚಿಕೊಳ್ಳುತ್ತವೆ. ಮಕ್ಕಳ ಸಾಹಿತ್ಯ ಸಮ್ಮೇಳನ ಪ್ರತಿವರ್ಷವೂ ನಡೆಯುವಂತಾಗಲಿ ಎಂದರು.
ಜಿಪಂ ಸದಸ್ಯ ಹಾರೊಗೊಳಿಗೆ ಪದ್ಮನಾಭ, ಮಹಮದಾಲಿ ಇದ್ದರು. ಪ್ರಗತಿ ನಿಲವಾಸೆ ಸಮ್ಮೇಳನ ಉದ್ಘಾಟಿಸಿದರು. ಟಿ.ಕೆ. ರಮೇಶ ಶೆಟ್ಟಿ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್ ಆಶಯ ನುಡಿಗಳನ್ನಾಡಿದರು.   ಪ್ರಾಂಜಲಿ ದೇವಾನಂದ್ ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಸಮ್ಮೇಳನಾಧ್ಯಕ್ಷರ ಮೆರವಣಿಗೆನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement