ಅರಣ್ಯ ಹಕ್ಕು ಅರಿವು ಮೂಡಿಸಲು ಮೇಷ್ಟ್ರಾದ ಕಾಗೋಡು
ಹೊಸನಗರ: ಎಲ್ಲಾ ತಿಳ್ಕೋಬೇಕಪ್ಪಾ. ಇಲ್ಲಾಂದ್ರೆ ನಿಮ್ಮ ಸಮಸ್ಯೆ ಬಗೆ ಹರಿಯೋದು ಹ್ಯಾಗೆ ಎಂದು ಒಮ್ಮೆ ಗದರಿ, ಮತ್ತೊಮ್ಮೆ ನಿಧಾನವಾಗಿ ಬುದ್ದಿ ಹೇಳುತ್ತಾ ಅರಣ್ಯ ಹಕ್ಕು ಬಗ್ಗೆ ಮಾತನಾಡಿದ ಸ್ಪೀಕರ್ ತರಗತಿಯ ಮಾಸ್ತರರ ರೀತಿಯಲ್ಲಿ ಗಮನ ಸೆಳೆದರು.
ಇದಕ್ಕೆ ಪೂರಕ ಎಂಬಂತೆ ಭಾಗವಹಿಸಿದ್ದ ಬಗರ್‌ಹುಕುಂ ರೈತರು, ಅರಣ್ಯ ಮೂಲನಿವಾಸಿಗಳು ತಮಗೆ ಅರ್ಥವಾಗದ ಒಂದೊಂದು ಸಮಸ್ಯೆಗಳ ಬಗ್ಗೆ ಒಂದೊಂದಾಗಿ ಕೇಳುತ್ತಿದ್ದ ಪ್ರಶ್ನೆಗೆ ಇದು ಹಾಗಲ್ಲ ತಮ್ಮ ಎಂದು ಸಮಸ್ಯೆ ಬಗ್ಗೆ ಬಿಡಿಸಿಡುತ್ತಿದ್ದ ಕಾಗೋಡಿನ ವೈಖರಿ ವಿಶೇಷವಾಗಿತ್ತು.
ಮೇಷ್ಟ್ರಾಗಿದ್ದು ಯಾಕೆ: ಸ್ಪೀಕರ್ ಕಾಗೋಡು ತಿಮ್ಮಪ್ಪ ಹೀಗೆ ಮೇಷ್ಟ್ರಾಗಿದ್ದು ತಾಲೂಕಿನ ನಗರ ಹೋಬಳಿಯ ಗ್ರಾಪಂ ಸಭಾಂಗಣದಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ ಕುರಿತು ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶನಾಲಯ ಹೊರತಂದಿರುವ ಪುಸ್ತಕ ಹಿಡಿದು ಮಾಹಿತಿ ನೀಡಿದರು.
ಇವರೇನಂತಾರೆ:ತಮ್ಮ ಹಿರಿ ವಯಸ್ಸಿನಲ್ಲೂ ಹಳ್ಳಿ ಹಳ್ಳಿ ತಿರುಗಾಡುತ್ತ ಅರಣ್ಯ ಸಮಸ್ಯೆ, ಉದ್ಯೋಗ ಖಾತ್ರಿ, ಸರ್ಕಾರಿ ಯೋಜನೆಗಳ ಅನುಷ್ಠಾನದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವ ಕಾಗೋಡು ತಿಮ್ಮಪ್ಪರ ಕಾಳಜಿ ನಮಗೆ ಮಾದರಿಯಾಗಿದೆ.
ಎನ್ನುತ್ತಾರೆ ಜಿಪಂ ವಿರೋಧಪಕ್ಷದ ನಾಯಕ ಕಲಗೋಡು ರತ್ನಾಕರ್
ಪರಿಹಾರಕ್ಕೆ ಯತ್ನ: ಸರ್ಕಾರ ಇರುವುದೇ ಬಡ ರೈತ ಕೂಲಿ ಕಾರ್ಮಿಕರ ಉದ್ದಾರಕ್ಕಾಗಿ. ನನಗೆ ಈಗ ಯಾವ ಪಕ್ಷವೂ ಇಲ್ಲ. ನಾನು ಯಾವ ಪಕ್ಷವೂ ಅಲ್ಲ. ಆದರೆ ಅಧಿಕಾರವಿದ್ದಾಗ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡದಿದ್ದರೆ ಇದ್ದೂ ಸತ್ತಂತೆ ಎನ್ನುತ್ತಾರೆ ಸ್ಪೀಕರ್ ಕಾಗೋಡು ತಿಮ್ಮಪ್ಪ.
--
'ಆಧುನಿಕ ಸಾಧನ ಜ್ಞಾನ ವಿಕಾಸಕ್ಕೆ ಬಳಕೆಯಾಗಲಿ'
ಶಿವಮೊಗ್ಗ: ಇಂದು ಕಂಪ್ಯೂಟರ್, ಇಂಟರ್‌ನೆಟ್ ಹಾವಳಿಯಿಂದ ವಿದ್ಯಾರ್ಥಿಗಳ ಮನಸ್ಸು ತಲ್ಲಣಗೊಳ್ಳುತ್ತಿದೆ. ಆಧುನಿಕ ಯುಗದ ಸಾಧನಗಳನ್ನು ವಿದ್ಯಾರ್ಥಿಗಳು ಜ್ಞಾನಮಟ್ಟ ವಿಕಾಸಕ್ಕೆ ಬಳಸಿಕೊಳ್ಳಬೇಕು ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕರೆ ನೀಡಿದರು.
ಇಲ್ಲಿನ ರೋಟರಿ ಕ್ಲಬ್ ಶಿವಮೊಗ್ಗ ಉತ್ತರದಿಂದ ಭಾನುವಾರ ಇಲ್ಲಿನ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರ್ದಿಷ್ಟ ಉದ್ದೇಶ ಮತ್ತು ಗುರಿಯಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ವಿದ್ಯಾರ್ಥಿ ಜೀವನದ ಭವಿಷ್ಯದ ಹಾದಿಯನ್ನು ನಿರ್ಧರಿಸುತ್ತದೆ ಎಂದರು.
ಅಭಿವೃದ್ಧಿಗೂ ಮಾರಕ: ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವಲಯ-11ರ ಉಪರಾಜ್ಯಪಾಲ ಸಿ.ಜೆ.ಆನಂದ್ ಮಾತನಾಡಿದರು. ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಕೆ.ಜಿ.ಪರಮೇಶ್ವರಪ್ಪ ಮಾತನಾಡಿ, ಇಂದು ಸರ್ಕಾರ ಹಾಗೂ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಒತ್ತು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಇವೆಲ್ಲದರ ಪ್ರಯೋಜನ ಪಡೆದು ಸುಂದರ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ವಿ. ನಂದ್ಯಪ್ಪ, ವಿ.ಕೃಷ್ಣಮೂರ್ತಿ ಹಾಜರಿದ್ದರು.