ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಯುಷ್ ವೈದ್ಯರಿಗೆ ಇನ್ನು ಬಯೋವುಟ್ರಿಕ್

Lingaraj Badiger
Updated On : 17 Feb 2014, 10:59 am

ಶಿವಮೊಗ್ಗ: ಸುಳ್ಳು ಪ್ರಮಾಣಪತ್ರ ಇಟ್ಟುಕೊಂಡು, ಯಾರ್ಯಾರದೋ ಹೆಸರಿನಲ್ಲಿ ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯರಿಗೆ ಈಗ ಮತ್ತೊಂದು ಕಂಟಕ ಎದುರಾಗಿದೆ.
ಮುಖ್ಯವಾಗಿ ಆಯುರ್ವೇದ ಮತ್ತು ಯುನಾನಿ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರೆಲ್ಲರೂ ಬಯೋವುಟ್ರಿಕ್ ವಿಧಾನದಲ್ಲಿ ಪ್ರಮಾಣಪತ್ರ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಿಂದ ಪಡೆಯುವುದನ್ನು ಕಡ್ಡಾಯ ಮಾಡಿದೆ.
ಈ ಹಿಂದೆ ಮಂಡಳಿಯು ವೃತ್ತಿನಿರತ ವೈದ್ಯರಿಗೆ ಭಾವಚಿತ್ರ ಹೊಂದಿದ ಪ್ರಮಾಣಪತ್ರ ಕೊಡುತ್ತಿತ್ತು. ಕೆಲ ವರ್ಷಗಳಿಂದ ಗುರುತಿನ ಚೀಟಿ ಕೊಡಲು ಶುರು ಮಾಡಿತು. ಆದರೆ, ಮಂಡಳಿಯ ಕಾರ್ಯಪಡೆಯು ರಾಜ್ಯದ ಕೆಲವು ಕಡೆ ದಾಳಿ ಮಾಡಿದಾಗ ಪ್ರಮಾಣಪತ್ರದಲ್ಲಿ ಹೆಸರಿದ್ದವರೇ ಬೇರೆ, ಅಲ್ಲಿರುವ ಫೋಟೊ ಬೇರೆ ಆಗಿದ್ದು ಕಂಡುಬಂದಿತ್ತು. ಆಜೀವ ನೋಂದಣಿ ಹೊಂದಿದ ಕೆಲವು ವೈದ್ಯರ ಮರಣದ ನಂತರ ಅವರ ನೋಂದಣಿ ಪತ್ರದಲ್ಲಿ ಅರ್ಹ ವಿದ್ಯಾರ್ಹತೆ ಹೊಂದಿಲ್ಲದ ಅನ್ಯ ವ್ಯಕ್ತಿಗಳು ಅವರ ಭಾವಚಿತ್ರ ನೋಂದಣಿ ಪತ್ರದಲ್ಲಿ ಅಂಟಿಸಿ ವೃತ್ತಿಯಲ್ಲಿ ತೊಡಗಿದ್ದರು.
ಅಲ್ಲದೆ, ಮಂಡಳಿಯ ಹೆಸರಿನಲ್ಲಿ ನಕಲಿ ನೋಂದಣಿ ಪ್ರಮಾಣ ಪತ್ರ ಹೊಂದಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವುದು ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಹೊಂದಿಲ್ಲದ ವಿದ್ಯಾರ್ಹತೆ, ನೋಂದಣಿ ಪತ್ರದೊಂದಿಗೆ ವೈದ್ಯ ವೃತ್ತಿಯಲ್ಲಿ ತೊಡಗಿಕೊಂಡಿದ್ದು ಪತ್ತೆಯಾಗಿತ್ತು.
ಲೋಪ ಸರಿಪಡಿಸಲು ಸಜ್ಜು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು 1965ರಿಂದ ಅರ್ಹ ವಿದ್ಯಾರ್ಹತೆ ಹೊಂದಿ ವೃತ್ತಿನಿರತರಾದ ವೈದ್ಯರಿಗೆ ಆಜೀವ ನೋಂದಣಿ ನೀಡುವ ಸಕ್ಷಮ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಈ ಪದ್ಧತಿಯ ಲೋಪ ಸರಿಪಡಿಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ನಕಲಿ ವೈದ್ಯರಿಗೆ ಚಾಟಿ ಬೀಸಲು ಸಜ್ಜಾಗಿದೆ.
ಮುಂದೆ ಏನು?: ಹಾಲಿ ಆಯುರ್ವೇದ ಮತ್ತು ಯುನಾನಿ ವೈದ್ಯ ವೃತ್ತಿಯಲ್ಲಿ ತೊಡಗಿರುವವರೆಲ್ಲರೂ ತಾವು ಹೊಂದಿರುವ ನೋಂದಣಿ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಗಳನ್ನು ಮಂಡಳಿಗೆ ಹಿಂತಿರುಗಿಸಬೇಕು. ನಂತರ ಕಡ್ಡಾಯವಾಗಿ ಬಯೋವುಟ್ರಿಕ್ ವಿಧಾನದಲ್ಲಿ ಬಾರ್ ಕೋಡ್ ಮತ್ತು ಇತರೆ ಸುರಕ್ಷಿತ ಅಂಶ ಹೊಂದಿರುವ ಹೊಸ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ಪಡೆಯಬೇಕು.
ಇಂತಹ ಸ್ಮಾರ್ಟ್ ಕಾರ್ಡ್‌ನಿಂದ ವ್ಯಕ್ತಿಯ ನಿರ್ದಿಷ್ಟ ಗುರುತಿಸುವಿಕೆ ಸಾಧ್ಯವಾಗುತ್ತದೆ. ಅಲ್ಲದೆ, ಅನಧಿಕೃತವಾಗಿ ವೈದ್ಯ ವೃತ್ತಿಯಲ್ಲಿ ತೊಡಗಿ ಸಮಾಜಕ್ಕೆ ಕಂಟಕಪ್ರಾಯರಾಗಿರುವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಹಾಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಭಾರತೀಯ ವೈದ್ಯ ಪದ್ಧತಿ ಮತ್ತು ಸಮನ್ವಯ ವಿಭಾಗದ ಅಧೀನ ಕಾರ್ಯದರ್ಶಿ ಟಿ.ಎನ್. ನರಸಿಂಹರಾಜು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶವು ಈಗ ಎಲ್ಲಾ ಜಿಲ್ಲಾ ಕೇಂದ್ರಗಳನ್ನು ತಲುಪಿದೆ.
- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement