ಚೆನ್ನಾಪುರದಲ್ಲಿ ಬೆಂಕಿ ತಗುಲಿ ಮನೆ ಭಸ್ಮ
ಸೊರಬ: ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಸುಟ್ಟು ಭಸ್ಮವಾದ ಘಟನೆ ಚೆನ್ನಾಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಮಾವಲಿ ಗ್ರಾಪಂ ವ್ಯಾಪ್ತಿಯ ಚೆನ್ನಾಪುರದ ಲಕ್ಷ್ಮಣಪ್ಪ ಚೀಲೂರು ಅವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಆಲ್ಮೇರಾ, ಟಿವಿ, ಸಣ್ಣ ಪುಟ್ಟ ಒಡವೆಗಳು ಸೇರಿದಂತೆ ಮನೆಯಲ್ಲಿರುವ ದವಸ, ಧಾನ್ಯಗಳೆಲ್ಲವೂ ಸುಟ್ಟು ಭಸ್ಮವಾಗಿದ್ದಲ್ಲದೇ ಮನೆಗೆ ಚಾಚಿಕೊಂಡಿದ್ದ ಕೊಟ್ಟಿಗೆ ಮನೆಗೆ ಬೆಂಕಿ ತಗುಲಿ ಒಂದು ಎಮ್ಮೆಗೂ ಸುಟ್ಟ ಗಾಯಗಳಾಗಿವೆ. ಇದರಿಂದ ಕುಟುಂಬದವರು ಮನೆಯಿಲ್ಲದೇ ಪರದಾಡುವಂತಾಗಿದೆ.
ಲಕ್ಷ್ಮಣ್ ಮತ್ತು ಆತನ ಹೆಂಡತಿ ಕೂಲಿಗಾಗಿ ತೆರಳಿದ್ದಾಗ, ಬೆಳಗ್ಗೆ ಪೂಜೆ ಮಾಡಿ ಹಚ್ಚಿದ ದೀಪ ಸಮೀಪದ ಹೂ ಮಾಲೆಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಶಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಮಧ್ಯಾಹ್ನದ ವರೆಗೂ ಯಾವುದೇ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಷಕ್ಕೆ ಕಾರಣವಾಯಿತು. ಮಧ್ಯಾಹ್ನ ಗ್ರಾಪಂನ ಪಿಡಿಓ, ಸದಸ್ಯ ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.