252 ಪುಟಗಳ ಲಗ್ನಪತ್ರಿಕೆ!
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಫೆ.17
ಮಗನ ಮದುವೆಗೆ ಅಪ್ಪನಾದವನು ಏನೆಲ್ಲಾ ಕೊಡುಗೆ ಕೊಡಬಹುದು? ಅದೇ ರೀತಿ ಮದುವೆಗೆ ಬಂದ ಕುಟುಂಬರು, ಸ್ನೇಹಿತರಿಗೆ ಭೋಜನದ ಜೊತೆಗೆ ಇನ್ನೇನು ಕೊಡಲು ಸಾಧ್ಯವಿದೆ, ಅಲ್ಲವೇ?
ಆದರೆ, ಇಲ್ಲೊಂದು ಅಚ್ಚರಿ ಇದೆ. ಶಿವಮೊಗ್ಗದ ಎಚ್.ವಿ. ಪಂಚಾಕ್ಷರಪ್ಪನವರು ತಮ್ಮ ಮಗನ ಮದುವೆಗೆ 252 ಪುಟಗಳ ಬೃಹತ್ ಆಹ್ವಾನ ಪತ್ರಿಕೆಯನ್ನೇ ಸಿದ್ಧಪಡಿಸಿದ್ದು, ಆತ್ಮೀಯರು ಕುಟುಂಬದವರಿಗೆ ವಿತರಿಸುತ್ತಿದ್ದಾರೆ!
ಮಗನ ಮದುವೆಯ ಹಿನ್ನೆಲೆ ಕಥೆ, ಕವನಗಳು, ವಿವಿಧ ವಿವಾಹ ಶೈಲಿಗಳ ವರ್ಣನೆ, ಮದುವೆಯ ನಂತರದ ಜೀವನ ವಿಧಾನ, ವಿವಾಹದ ಅರ್ಥವ್ಯಾಪ್ತಿ, ಶಾಸ್ತ್ರ- ಸಂಪ್ರದಾಯ... ಹೀಗೆ ವಿವಾಹದ ವೈವಿಧ್ಯಮಯ ಮಜಲುಗಳನ್ನು ಒಳಗೊಂಡ ಲೇಖನ, ಹಾಸ್ಯ ಚಟಾಕಿಗಳು ಇಲ್ಲಿ ಅಕ್ಷರ ರೂಪದಲ್ಲಿ ಪ್ರಸ್ತುತಗೊಂಡಿದೆ.
ವಿಶೇಷವೆಂದರೆ ಪಂಚಾಕ್ಷರಪ್ಪನವರ ಪುತ್ರ ಎಚ್.ಪಿ. ವಿಜಯಕುಮಾರ್ ಅವರದ್ದು ಪ್ರೇಮ ವಿವಾಹ. ಈ ಪ್ರೇಮ ವಿವಾಹವನ್ನು ಚೆಂದಗಾಣಿಸುವ ಉದ್ದೇಶದಿಂದ ಈ ಅಚ್ಚರಿಯ ಆಹ್ವಾನ ಪತ್ರಿಕೆಯನ್ನು ಮೂರು ತಿಂಗಳು ಶ್ರಮವಹಿಸಿ ಸಿದ್ಧಪಡಿಸಿದ್ದಾರಂತೆ.
ಏನೆಲ್ಲಾ ವಿಶೇಷತೆಗಳಿವೆ?: ಈ ವಿವಾಹ ಪ್ರೇಮ ವಿವಾಹ ಎಂಬುದನ್ನು ಆಹ್ವಾನ ಪುಸ್ತಕದ ಮುಖಪುಟದಲ್ಲೇ ಕವನವೊಂದರ ಮೂಲಕ ದೊಡ್ಡ ಅಕ್ಷರಗಳಲ್ಲೇ ಕಾಣಿಸಿರುವುದು ಬಹಳ ವಿಶೇಷ. ಹೊತ್ತಿಗೆಯ ಮೊದಲ 6 ಪುಟಗಳಲ್ಲಿ ಮದುವೆಯನ್ನು ಚಲನಚಿತ್ರಕ್ಕೆ ಹೋಲಿಕೆಯಾಗುವಂತೆ ಚಿತ್ರಿಸಲಾಗಿದೆ. ಅಂದರೆ, ಆತ್ಮೀಯರು, ಬಂಧುಗಳು, ಸ್ನೇಹಿತರು ಮದುವೆಯಲ್ಲಿ ವಹಿಸುವ ಜವಾಬ್ದಾರಿಗಳನ್ನು ಹಾಸ್ಯಭರಿತವಾಗಿ ವರ್ಣಿಸಲಾಗಿದೆ. ಆಹ್ವಾನ ಪುಸ್ತಕದಲ್ಲೇನೇನಿದೆ ಎಂಬುದನ್ನು ತಿಳಿಸುವ ಪರಿವಿಡಿಯೇ ನಾಲ್ಕು ಪುಟವಿದೆ!
ಮನೆಕಥೆ: ಲವ್ ಆ್ಯಂಜ್ ಅರೇಂಜ್ ಮ್ಯಾರೇಜ್ಗೆ ವರನ ತಂದೆಯ ಸಮ್ಮತಿ ಶಿರ್ಷಿಕೆಯಲ್ಲಿ ಪಂಚಾಕ್ಷರಪ್ಪನವರು ತಮ್ಮ ಮನೆ ಕಥೆಯನ್ನು ಸೂಚ್ಯವಾಗಿ ಬಿಡಿಸಿಟ್ಟಿದ್ದಾರೆ. ಕಥಾನಾಯಕ ತಮ್ಮ ಮೂರನೇ ಮಗ, ಏಳೆಂಟು ವರ್ಷಗಳ ಹಿಂದೆ ಯಾರಿಗೂ ಸೋಲದ ವಿಜಯಕುಮಾರ ತನಗರಿವಿಲ್ಲದಂತೆ ಶ್ವೇತಾಳ ಪ್ರೇಮ ಪಾಶದಲ್ಲಿ ಬಿದ್ದಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.
ನಿತ್ಯ ಒಂದಲ್ಲ ಒಂದು ನೆಪದಲ್ಲಿ ಇಬ್ಬರ ಭೇಟಿ, ಮಾತು ಪರಸ್ಪರ ಪ್ರೇಮ ನಿವೇದನೆ, ಅಷ್ಟೆ ಅದಕ್ಕಿಂತ ಮುಂದುವರೆಯುವ ಸಾಹಸ ಮಾಡಿಲ್ಲ. ಸಂಯಮ, ಸಭ್ಯತೆ ರೇಖೆ ದಾಟಿಲ್ಲ ಎಂದೂ ಹೆಮ್ಮೆಯಿಂದ ಹೊತ್ತಗೆಯಲ್ಲಿ ಬರೆದುಕೊಂಡಿದ್ದಾರೆ.
ಸಮ್ಮತಿ ಹೀಗಾಯ್ತು: ಶಿವಮೊಗ್ಗದ ಎಚ್. ಸಿದ್ದಯ್ಯ ರಸ್ತೆಯಲ್ಲಿರುವ ನನ್ನ ಅನುಗ್ರಹ ನಿವಾಸ ನಿರ್ಮಾಣ ಹಂತದಲ್ಲಿದ್ದ ಸಂದರ್ಭವದು. ಗೌರವರ್ಣದ ಚಂದನೆಯ ಹುಡುಗಿಯೊಬ್ಬಳು ಬಂದವಳೇ ನನ್ನ ಪಾದಕ್ಕೆರಗಿ ಆಶೀರ್ವಾದ ಬೇಡಿದಳು. ಅಚ್ಚರಿ ಕುತೂಹಲ ಆನಂದದ ಸಮ್ಮಿಳಿತ ಭಾವದಿಂದ ಭಾವುಕನಾದೆ. ಮನಸಾರೆ ಆಶೀರ್ವದಿಸಿದ್ದೆ. ಇದನ್ನೆಲ್ಲಾ ಅನತಿ ದೂರದಿಂದ ನೋಡುತ್ತಿದ್ದ ವಿಜಯಕುಮಾರ ನಸು ನಕ್ಕಿದ್ದ ಎಂದು ಕೆಲವು ವಿಶೇಷ ಘಟನೆಗಳನ್ನು ಆಹ್ವಾನ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ಪಂಚಾಕ್ಷರಪ್ಪ. ಅಂತಿಮವಾಗಿ ಚನ್ನವೀರ ಕಣವಿಯವರ ಕವನದೊಂದಿಗೆ ಆಹ್ವಾನ ಪುಸ್ತಕ ಕೊನೆಯಾಗುತ್ತದೆ.
ಮದುವೆ ವಿಶೇಷ: ಫೆ.27ರಂದು ಶಿವಮೊಗ್ಗದಲ್ಲಿ ನಡೆಯುವ ವಿವಾಹ ಸಂದರ್ಭದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ವಿಜಯಲಕ್ಷ್ಮಿ ತಂಡದಿಂದ ವೀಣಾ ವಾದನವಿರುತ್ತದೆ. ಜೊತೆಗೆ ನಾಣ್ಯ ಸಂಗ್ರಾಹಕರರೂ ಆಗಿರುವ ವರನ ತಂದೆ ಪಂಚಾಕ್ಷರಪ್ಪನವರು ಅಪರೂಪದ ನಾಣ್ಯ ನೋಟುಗಳನ್ನು ಪ್ರದರ್ಶನಕ್ಕಿಡುತ್ತಿದ್ದಾರೆ.
ಇದು ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹದ ಕಲ್ಪನೆ. ಆಹ್ವಾನ ಪತ್ರಿಕೆಯ ಜೊತೆಗೆ ವಿವಾಹ ಕುರಿತು ಒಂದಷ್ಟು ಮಾಹಿತಿ ಇಲ್ಲಿ ಕೊಟ್ಟಿದೇವೆ. ಕುಟುಂಬದವರು- ಸ್ನೇಹಿತರಿಗೆ ಇದನ್ನು ತಲುಪಿಸಿದ್ದು,
ಅನೇಕರು ಇಷ್ಟಪಟ್ಟಿದ್ದಾರೆ.
ಟಿ ಎಚ್.ವಿ.ಪಂಚಾಕ್ಷರಪ್ಪವರನ ತಂದೆ.