ಇಂದು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಹೊಸನಗರ: ರಸ್ತೆ ದುರಸ್ತಿ ಕಾಣದೆ ಸಂಪರ್ಕಕ್ಕೆ ನರಕ ಯಾತನೆ ಅನುಭವಿಸುತ್ತಿರುವ ಕಾರಣ ಕೂಡಲೇ ರಸ್ತೆ ದುರಸ್ತಿಗೆ ಆಗ್ರಹಿಸಿ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಫೆ.18ರಂದು ಗ್ರಾಮಸ್ತರು ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಜಲ ವಿದ್ಯುತ್ ಯೋಜನೆಗಾಗಿ ಮನೆ ಜಮೀನು ತ್ಯಾಗ ಮಾಡಿ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿರುವ ನಗರ ಹೋಬಳಿಯ ರಸ್ತೆ ಅವ್ಯವಸ್ಥೆಯನ್ನು ಕೇಳುವವರೆ ಇಲ್ಲವಾಗಿದೆ. ಮಾಸ್ತಿಕಟ್ಟೆಯಿಂದ ನಗರ, ಯಡೂರಿನಿಂದ ಮಾಸ್ತಿಕಟ್ಟೆ, ಮತ್ತು ಮಾಸ್ತಿಕಟ್ಟೆಯಿಂದ ಹುಲಿಕಲ್ ಮಾರ್ಗ ಜಿಲ್ಲಾ ಪ್ರಮುಖ ರಸ್ತೆಯಾಗಿ ಗುರುತಾಗಿದ್ದರೂ ಕೂಡ ಅಭಿವೃದ್ಧಿ ಕಾಣದೆ ಹಳ್ಳಿ ರಸ್ತೆಗಿಂತಲೂ ಕೆಟ್ಟದ್ದಾಗಿದೆ. ರಸ್ತೆ ಅವ್ಯವಸ್ಥೆಯಿಂದಾಗಿ ವಾಹನ ಓಡಿಸುವುದೆ ಕಷ್ಟಕರವಾಗಿದ್ದು, ಪ್ರತಿಭಟನೆ ಅನಿವಾರ್ಯ ಎಂದು ಗ್ರಾಮಸ್ತರು ತಿಳಿಸಿದ್ದಾರೆ.