ಪ್ರಯತ್ನವಿಲ್ಲದೇ ಗುರಿ ತಲುಪಲು ಅಸಾಧ್ಯ: ಪ್ರೊ. ಕೃಷ್ಣೇಗೌಡ
ಕ.ಪ್ರ.ವಾರ್ತೆ, ಭದ್ರಾವತಿ, ಫೆ. 17
ಬಹಳಷ್ಟು ಬಾರಿ ಗುರಿಯನ್ನು ಮುಟ್ಟಲು ಯತ್ನ ಮಾಡದಿರುವುದು ವೈಫಲ್ಯದ ಕಾರಣವಾಗಿರದೆ ಗುರಿಯನ್ನೇ ಹೊಂದದಿರುವುದು ವೈಫಲ್ಯದ ಕಾರಣವಾಗಿರುತ್ತದೆ ಎಂದು ಮೈಸೂರಿನ ಖ್ಯಾತ ಹಾಸ್ಯ ವಾಗ್ಮಿ ಪ್ರೊ. ಕೃಷ್ಣೇಗೌಡ ಹೇಳಿದರು.
ಪಟ್ಟಣದ ಬಿಜಿಎಸ್ ಕೇಂದ್ರೀಯ ಶಾಲೆಯ ಬಿಜಿಎಸ್ ಫೆಸ್ಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ವಿವೇಕಾನಂದರು ಹೇಳುವಂತೆ ಶಿಕ್ಷಣ ಮಾನವನಲ್ಲಿ ಮೊದಲೇ ಅಂಕುರವಾಗಿರುವ ಪ್ರತಿಭೆಯನ್ನು ವಿಶದೀಕರಿಸುವ ಒಂದು ಪ್ರಕ್ರಿಯೆಯಾಗಿದೆ. ಭಾರತರತ್ನ ಪ್ರಶಸ್ತಿ ಪಡೆದ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಕೋಲಾರದ ಕುಗ್ರಾಮದ ಶಾಲೆಯೊಂದರಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಎಂದು ತಿಳಿಸಿದರು.
ಜಾಗೃತರಾಗಿರಿ: ಶಿಕ್ಷಣವೆಂದರೆ ಉತ್ತಮ ಉನ್ನತ ಪದವಿಯನ್ನು ಪಡೆದು ಕೈ ತುಂಬಾ ಹಣ ಗಳಿಸುವುದೆಂದಷ್ಟೇ ನಾವು ಅರ್ಥೈಸಿಕೊಳ್ಳುವ ವ್ಯಾಪಾರೀಕರಣ ಚಿಂತನೆಯಾಗಿಬಿಟ್ಟಿದೆ. ಮಕ್ಕಳಿಗೆ ಹೆಚ್ಚು ಗ್ರಹಿಸುವ ಮತ್ತು ಅನುಕರಿಸುವ ಶಕ್ತಿ ಇರುತ್ತದೆ. ಹಾಗಾಗಿ, ಮಕ್ಕಳ ಎದುರು ನಾವು ಮಾತಾಡುವಾಗ ಮತ್ತು ವ್ಯವಹರಿಸುವಾಗ ಜಾಗೃತರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಶ್ರೀಬಾಲಗಂಗಾಧರನಾಥ ಸ್ವಾಮಿಗಳು ಅತಿ ದೊಡ್ಡ ಶೈಕ್ಷಣಿಕ ಕೈಂಕರ್ಯವನ್ನು ಮಾಡಿದ್ದಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಮುಖದಲ್ಲಿ ಅಪೂರ್ವವಾದ ಕಾಂತಿ ಇದೆ. ಮುಂದೆ ಇಂತಹ ಮಕ್ಕಳು ದೇಶದ ಸಕ್ರಿಯ ನಾಗರಿಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಲೆಯ ಪ್ರಾಂಶುಪಾಲ ಅಶ್ವತ್ಥ್ ಶಾಲೆಯ ಚಟುವಟಿಕೆಗಳ ವರದಿ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಸಮಾರಂಭವನ್ನು ಉದ್ಘಾಟಿಸಿ ನಿರೂಪಿಸಿದರು.