ಭಾಷೆಗೆ ಸ್ವಯಂ ಗಡಿ ಸಲ್ಲ: ಪ್ರೊ. ಜಾವೀದ್
ಕ.ಪ್ರ.ವಾರ್ತೆ, ಶಿಕಾರಿಪುರ, ಫೆ.17
ಭಾಷೆಯನ್ನು ಸೀಮಿತ ವರ್ಗ, ಜನಾಂಗ ಸಮುದಾಯಕ್ಕೆ ಮೀಸಲಿರಿಸುವ ಮೂಲಕ ಸ್ವಯಂ ಗಡಿ ಹಾಕಿಕೊಂಡಿದ್ದು, ಈ ದುಸ್ಥಿತಿಯು ಭಾಷೆಗೆ ಮಾತ್ರವಲ್ಲದೆ ನಮಗೆ ನಾವು ಮಾಡಿಕೊಳ್ಳುತ್ತಿರುವ ದ್ರೋಹ ಎಂದು ಕುವೆಂಪು ವಿವಿ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎ ಜಾವೀದ್ ವಿಷಾದ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ಜಯನಗರದಲ್ಲಿನ ಜುಬೇದ ಮಹಿಳಾ ಕಲಾ ಪದವಿ ಕಾಲೇಜಿನಲ್ಲಿ ನಡೆದ 2 ದಿನದ ರಾಷ್ಟ್ರೀಯ ಉರ್ದು ಮತ್ತು ಸಾಹಿತ್ಯದ ಲೋಕವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾಷೆ ಪ್ರತಿಯೊಬ್ಬ ವ್ಯಕ್ತಿಗೆ ಮಾಧ್ಯಮವಾಗಿದ್ದು, ವಿವಿಧ ಭಾಷೆಯ ಅಧ್ಯಯನದಿಂದ ವ್ಯಕ್ತಿ, ದೇಶ ಹಾಗೂ ಸಮಾಜದಲ್ಲಿ ಬಹು ನಿರ್ಭೀತಿಯಿಂದ ಬದುಕಬಹುದಾಗಿದೆ. ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಹತ್ವ, ಲಕ್ಷಣವಿದ್ದು, ನಿರ್ದಿಷ್ಟ ಗಡಿ ಎಂಬುದಿಲ್ಲ ಎಂದರು.
ಸಾಹಿತಿ ಶಾಹಿದ್ ಬಾಗಲಕೋಟೆ ಮಾತನಾಡಿ, ಭಾಷೆ ಎಂದಿಗೂ ಬಡವ ಅಲ್ಲ. ಎಲ್ಲಾ ಭಾಷೆಗಳು ಶ್ರೀಮಂತವಾಗಿದ್ದು, ಉರ್ದು ಘಜಲ್ ಜನಪ್ರಿಯವಾಗಿದ್ದು, ಗದ್ಯ- ಪದ್ಯಗಳ ಅಭಿವೃದ್ಧಿಯಾಗಬೇಕಾಗಿದೆ ಎಂದರು.
ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಮದೀನತ್ ಉಲ್ ಉಲೂಂ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಮಾತನಾಡಿದರು. ಕುವೆಂಪು ವಿವಿ ಉರ್ದು ವಿಭಾಗದ ಪ್ರೊ. ಸೈಯದ್ ಅಕೀಲ್, ಸಾಹಿತಿ ಸಾಗರ್ ಕರ್ನಾಟಕಿ, ಸಾಜಿದ್ ಅಹ್ಮದ್, ನಿಸಾರ್ ಅಹ್ಮದ್ ಹಾವೇರಿ, ಸಂಪನ್ಮೂಲ ವ್ಯಕ್ತಿ ಡಾ. ಜೆಮ್ಶೆಡ್ ಅಹ್ಮದ್ ಮತ್ತಿತರರು ಮಾತನಾಡಿದರು. ಡಾ. ಅಫಾಕ್ ಅಲಮ್ ಸಿದ್ದಿಕಿ ಸ್ವಾಗತಿಸಿ,ಪ್ರಾಚಾರ್ಯ ಸೈಯದ್ ರಿಹಾನಾ ಭಾನು ನಿರೂಪಿಸಿ ಎನ್.ಎ. ಮಡ್ಡಿ ವಂದಿಸಿದರು.