'ಮಹಿಳಾ ಸಾಧಕರ ಕಡೆಗಣಿಸುವಂತಿಲ್ಲ'
ಕ.ಪ್ರ.ವಾರ್ತೆ, ಹೊಸನಗರ, ಫೆ.17
ಸಾಧನೆ ಕೇವಲ ಪುರುಷರ ಸ್ವತ್ತಲ್ಲ. ಹಿಂದಿನಿಂದಲೂ ಅನೇಕ ವಿಶಿಷ್ಟ ಸ್ಥಾನಮಾನಗಳಲ್ಲಿ ಗುರುತಿಸಿಕೊಂಡಿರುವ ಮಹಿಳೆಯರನ್ನು ಸಾಧನೆಯ ಹಾದಿಯಲ್ಲ ಕಡೆಗಣಿಸುವಂತಿಲ್ಲ ಎಂದು ಹೊಂಬುಜ ಜೈನಮಠದ ದೇವೇಂದ್ರ ಕೀರ್ತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹೊಂಬುಜ ಜೈನಮಠ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಉದ್ಘಾಟಿಸಿದ ಶ್ರೀಗಳು, ಇಂದು ಮಹಳೆಯರು ಹಿಂದಿಗಿಂತಲೂ ಹೆಚ್ಚು ಸಬಲರಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ತಮ್ಮ ಪ್ರಾಬಲ್ಯ ತೋರುತ್ತಿದ್ದಾರೆ ಎಂದರು.
ಬಬಿತ ಪ್ರೇಮಕುಮಾರ್ ಕಾರ್ಗಲ್ ಮಲೆನಾಡಿನ ಮಹಿಳೆಯರ ಬದುಕು, ಸಂಸ್ಕೃತಿ, ಬವಣೆ ಕುರಿತ ವಿಶೇಷ ಉಪನ್ಯಾಸ ನೀಡಿ, ಮಹಿಳೆ ಇಂದು ಕೇವಲ ಅಡುಗೆ ಮನೆಗೆ ಸೀಮಿತವಾಗಿಲ್ಲ. ಬದಲಾಗಿ ಇಡೀ ಕುಟುಂಬ ನಡೆಸುವ ಜವಾಬ್ದಾರಿಯ ನೊಗ ಹೊತ್ತಿದ್ದಾಳೆ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನ ಸ್ವಂತ ಶಕ್ತಿಯ ಮೂಲಕ ಗುರುತಿಸಿಕೊಳ್ಳುತ್ತಿದ್ದಾಳೆ ಎಂದರು.
ಸಮಾವೇಶದ ಅಧ್ಯಕ್ಷತೆಯನ್ನು ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಕೇಸರಿ ರತ್ನರಾಜಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುಳಾ ಅಭಯಚಂದ್ರ ಜೈನ್ ಮೂಡಬಿದಿರೆ, ಲತಾ ನಿರಂಜನ್ ಧಾರವಾಡ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಮಲೆನಾಡು ವಲಯದ ಮಹಿಳಾ ಸಮಾಜದ ಸದಸ್ಯರು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.