ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಶಿವಮೊಗ್ಗ: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಶಿವಮೊಗ್ಗ ವಿಭಾಗದ ನೌಕರರು ವಿವಿಧ ಬೇಡಿಕೆಗೆ ಆಗ್ರಹಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಜಿಲ್ಲಾ ಮುಖ್ಯ ಅಂಚೆ ಕಚೇರಿ ಬಳಿ ಧರಣಿ ನಡೆಸಿದ ಅಂಚೆ ನೌಕರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಗ್ರಾಮೀಣ ಅಂಚೆ ಸೇವಕರನ್ನು ಪೌರ ನೌಕರ ಸಿವಿಲ್ ಸರ್ವೆಂಟ್ಸ್ ಎಂದು ಪರಿಗಣಿಸಿ ಇಲಾಖೆಯ ನೌಕರರಿಗೆ ಕೊಡುವ ಎಲ್ಲಾ ಸೌಕರ್ಯ ನೀಡಬೇಕು, ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ನೌಕರರನ್ನು ಸೇರಿಸಿಕೊಳ್ಳಬೇಕು, ಅನುಕಂಪದ ಆಧಾರದ ಮೇಲೆ ಶೇ.100ರಷ್ಟು ನೌಕರಿ ನೀಡಬೇಕು, ಶೇ.50ರಷ್ಟು ಡಿಎ ಮರ್ಜರ್ ಮಾಡುವುದು, ಪೋಸ್ಟ್ಮನ್ ಮತ್ತು ಎಂಟಿಎಸ್ಗಳ ಶೇ.25 ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಕೊಡುವುದು, ಹೊರಗುತ್ತಿಗೆ ಆಧಾರದ ಮೇಲೆ ಶೇ.25ರಷ್ಟು ತೆಗೆದುಕೊಳ್ಳದೇ ಅಂಚೆ ಸೇವಕರನ್ನೇ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಶಿವಮೊಗ್ಗ ವಿಭಾಗದ ಮುಖರಾದ ಈಶ್ವರಪ್ಪ, ರಾಘವೇಂದ್ರ, ರಾಜಕುಮಾರ್ ಮತ್ತಿತರರು ಇದ್ದರು.
ಭದ್ರಾವತಿಯಲ್ಲಿ ಮುಷ್ಕರ
ಭದ್ರಾವತಿ: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕರೆಗೆ ಓಗೊಟ್ಟು ಪಟ್ಟಣದ ಅಂಚೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡರು.
ಗ್ರಾಮೀಣ ಅಂಚೆ ಸೇವಕರನ್ನು ಪೌರನೌಕರ ಎಂದು ಪರಿಗಣಿಸಿ ಇಲಾಖೆಯು ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನೂ ನೀಡಬೇಕು, ಕೇಂದ್ರದ ಏಳನೇ ವೇತನ ಆಯೋಗದ ವ್ಯಾಪ್ತಿಗೆ ಗ್ರಾಮೀಣ ಅಂಚೆ ಸೇವಾ ನೌಕರರನ್ನು ಸೇರಿಸಿಕೂಳ್ಳಬೇಕು, ಅನುಕಂಪದ ಆಧಾರದ ಮೇಲೆ ಶೇಕಡ 100ರಷ್ಟು ನೌಕರಿಯ ಸೌಲಭ್ಯವನ್ನು ನೀಡಬೇಕು ಎಂದು ಪ್ರತಿಭಟನಾನಿರತರ ಪರವಾಗಿ ಜಿಲ್ಲಾ ಗ್ರಾಮೀಣ ಅಂಚೆ ಸೇವಾ ನೌಕರರ ಸಂಘದ ಅಧ್ಯಕ್ಷ ಕೆ.ಲಿಂಗರಾಜು, ಕಾರ್ಯದರ್ಶಿ ಎಚ್.ವಿ. ರಾಜ್ಕುಮಾರ್ ತಿಳಿಸಿದರು. ಜವರೇಗೌಡ, ಶ್ಯಾಮರಾವ್, ಸುರೇಶ್, ಹಾಲಮ್ಮ, ಸೀತಾಲಕ್ಷ್ಮಿ ನೇತೃತ್ವ ವಹಿಸಿದ್ದರು.
ಸಾಗರದಲ್ಲಿ ಪ್ರತಿಭಟನೆ
ಸಾಗರ: ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ಮಂಗಳವಾರ ಗ್ರಾಮೀಣ ಅಂಚೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ತಾಲೂಕು ಶಾಖೆಯ ಕಾರ್ಯದರ್ಶಿ ಕೆ.ಎಲ್.ಮಂಜಪ್ಪ ಮಾತನಾಡಿ, ದೇಶದಲ್ಲಿ ಗುಲಾಮಗಿರಿ ಇದ್ದರೆ ಅದು ಗ್ರಾಮೀಣ ಅಂಚೆ ಇಲಾಖೆಯಲ್ಲಿ ಮಾತ್ರ. ಸುಮಾರು 30-40 ವರ್ಷದಿಂದ ಗ್ರಾಮೀಣ ಭಾಗದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಅಂಚೆ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕೇಂದ್ರ ಸರ್ಕಾರ ಶೋಷಿಸುತ್ತಿದೆ ಎಂದು ದೂರಿದರು. ಸಂಘದ ಅಧ್ಯಕ್ಷ ಸುರೇಶ್ ಎಂ.ಎಲ್. ಮಾತನಾಡಿದರು. ಸಂಘದ ಸುಬ್ರಹ್ಮಣ್ಯ ಕಾರ್ಗಲ್, ಶಶಿಕಲಾ ಕಾಗೋಡು, ಚಂದ್ರಕಲಾ ಕಾನ್ಲೆ, ಪ್ರಭಾಕರ ರಾವ್ ನಿಸರಾಣಿ, ಶಿವರಾಮ ಮಾರುತಿಪುರ, ರಮೇಶ್ ಕೆಳದಿ ಇತರರು ಹಾಜರಿದ್ದರು.
ಸೊರಬದಲ್ಲಿ ಮುಷ್ಕರ
ಸೊರಬ: ಅಖಿಲ ಭಾರತ ಅಂಚೆ ಗ್ರಾಮೀಣ ನೌಕರರ ಸಂಘದ ವತಿಯಿಂದ, ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಮಂಗಳವಾರ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ದಿಷ್ಟಾವಧಿ ಕಾಲ ಮುಷ್ಕರ ಆರಂಭಿಸಿದರು.
ಸಂಘದ ಅಧ್ಯಕ್ಷ ಕೆ.ಲಿಂಗರಾಜು ಮಾತನಾಡಿ, ಪ್ರತಿಯೊಬ್ಬ ಜಿ.ಡಿ.ಎಸ್. ನೌಕರರು ಪ್ರತಿಯೊಂದು ಬಿ.ಓ.ಗಳಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುತ್ತಿದ್ದು ಇಲಾಖೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಅಂತಹ ಶ್ರಮಿಕರ ಜೀವನಕ್ಕೆ ತಕ್ಕ ಪ್ರತಿಫಲ ಇನ್ನು ಸಿಗಲಿಲ್ಲ. ಇನ್ನಾದರು ಇಲಾಖೆ ಗ್ರಾಮೀಣ ಅಂಚೆ ನೌಕರರನ್ನು ಪೌರ ನೌಕರ, ನಾಗರಿಕ ನೌಕರರೆಂದು ಪರಿಗಣಿಸಿ, ಇಲಾಖೆ ನೀಡುವ ಎಲ್ಲಾ ಸೌಲಭ್ಯಗಳನ್ನು ಓದಗಿಸಬೇಕು ಎಂದರು.
ಕಾರ್ಯದರ್ಶಿ ಎಚ್.ವಿ.ರಾಜಕುಮಾರ್, ವಲಯ ಕಾರ್ಯದರ್ಶಿ ಕೆ.ಸಿ.ಅಣ್ಣಪ್ಪ, ವಲಯ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಪೋಸ್ಟ ಮಾಸ್ಟರ್ಕೆ.ಶಿವಪ್ಪ, ಎಂ.ಬಿ. ಮೂರ್ತಿ ಹಾಲಗಳಲೆ, ಕೃಷ್ಣಮೂರ್ತಿ ಡಿ.ಎಸ್, ನಾಗರಾಜ ಹೆಚ್, ರವೀಂದ್ರನಾಥ ಇತರರು ಇದ್ದರು.